ರಾಜಕೀಯ ಸವಾಲು ಸ್ವೀಕರಿಸಲು ಸಿದ್ಧ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.15:- ನಾನು ಆಲೋಚಿಸಿ ಯಾವುದೇ ರಾಜಕೀಯ ಸವಾಲು ಸ್ವೀಕರಿಸಲು ಸಿದ್ಧನಾಗಿಯೇ ಪ್ರವೇಶ ಮಾಡಿದ್ದೇನೆ ಎಂದು ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಚ್ಚು ನುಡಿಗಳನ್ನಾಡಿದರು.
ಬಿಜೆಪಿ ಪಕ್ಷದ ಅಧಿಕೃತ ಲೋಕಸಭಾ ಅಭ್ಯರ್ಥಿಯಾದ ಬಳಿಕ ಮೊದಲ ಬಾರಿಗೆ ಬಿಜೆಪಿ ಕಚೇರಿಗೆ ಅದ್ಧೂರಿಯಾಗಿ ಆಗಮಿಸಿ ಮಾತನಾಡಿದ ಅವರು, ಇಂತಹದೊಂದು ಸ್ವಾಗತ ನಿರೀಕ್ಷೆ ಮಾಡಿರಲಿಲ್ಲ. ಒಂದು ವಾರದಿಂದ ಮೌನವಾಗಿ ಇದ್ದಿನಿ. ಕಳೆದ ಒಂದು ವರ್ಷದಿಂದ ನಾನು ರಾಜಕೀಯದ ಕಡೆ ಬರುವ ನಿರ್ಧಾರ ಮಾಡಿದೆನು. ಹಲವು ವರ್ಷದಿಂದ ಸಾರ್ವಜನಿಕ ಕಾರ್ಯಕ್ರಮ, ಅಭಿವೃದ್ಧಿ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ಒಂದು ಹಂತದವರೆಗೆ ನಮ್ಮಿಂದ ಮಾಡಬಹುದು ಅದಾದ ಬಳಿಕ ಕೆಲಸ ಮಾಡಲು ರಾಜಕೀಯ ಅವಕಾಶ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪ್ರವೇಶಿಸಿದ್ದು, ಎಲ್ಲರ ಆಶೀರ್ವಾದದಿಂದ ಮುನ್ನೆಡೆಯುತ್ತೇನೆ ಎಂದರು.
ನಿಮ್ಮ ರಾಜಕೀಯ ಪ್ರವೇಶದ ಹಿಂದೆ ರಾಜಸ್ಥಾನದಲ್ಲಿರುವ ಮಾವನವ ಪ್ರೇರಣೆಯೇ ಇತ್ತೇ ಎಂಬಿತ್ಯಾದಿ ಊಹಾಪೆÇೀಹಗಳಲ್ಲಿ ಸತ್ವವಿಲ್ಲ. ನಾನು ನಿರ್ಧರಿಸಿದ ಹಲವು ಚರ್ಚೆಗಳ ಬಳಿಕ ಪ್ರವೇಶಿಸಿದ್ದು, ತಮ್ಮ ಸ್ವಯಂ ನಿರ್ಧಾರವಾಗಿದೆ. ಕೇಂದ್ರದ ನಿಲುವು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಆಲೋಚನೆ ಹಾಗೂ ನನ್ನ ಆಲೋಚನೆ ಸಮೀಕರಣದಿಂದ ನಾನು ಸ್ಪರ್ಧೆ ಮಾಡಬೇಕೆಂದು ಮನಸ್ಸು ಮಾಡಿದೆ ಎಂದು ಹೇಳಿದರು.
ಚುನಾವಣಾ ರಾಜಕೀಯದ ಸವಾಲು ಸ್ವೀಕರಿಸುವ ಕುರಿತು ಪ್ರತಿಕ್ರಯಿಸಿ, ಯಾವುದೇ ದೊಡ್ಡ ಚಾಲೆಂಜ್ ಇದ್ದರೂ ಸ್ವೀಕರಿಸಲು ನಿರ್ಧರಿಸಿಯೇ ಬಂದಿದ್ದೇನೆಂದರು. ಇನ್ನೂ ರಾಜಕೀಯ ಪ್ರವೇಶಿಸಿದ ಮೇಲೆ ಎಸಿ ರೂಮ್ ಮಾತ್ರವಲ್ಲ, ಜನರ ಬಳಿಯೂ ಇರಬೇಕೆಂಬುದನ್ನು ಅರಿತು ಬಂದಿದ್ದೇನೆ. ಕಳೆದ ಒಂದು ವರ್ಷದಿಂದಲೂ ಜನರೊಟ್ಟಿಗೆ ಇದ್ದೆನೆಂದರು. ಇನ್ನೂ ರಾಜವಂಶಸ್ಥರ ಆಸ್ತಿ ಹಾಗೂ ಇನ್ನಿತರ ವಿಚಾರಗಳು ನ್ಯಾಯಾಲಯದ ಹಂತದಲ್ಲಿರುವುದರಿಂದ ನ್ಯಾಯಾಲಯದ ಹಂತದಲ್ಲಿಯೇ ಅವುಗಳನ್ನು ಬಗೆಹರಿಸಿಕೊಳ್ಳುತ್ತೇವೆಂದರು.
ನನ್ನ ಅಜ್ಜ ಸೇರಿ ನಮ್ಮ ಹಿರಿಯರಿಗೆ ಇದ್ದ ಕನಸ್ಸನ್ನು ನನಸು ಮಾಡಬೇಕೆಂಬುದು ನನ್ನ ಮೂಲ ಉದ್ದೇಶ. ದಕ್ಷಿಣ ಭಾರತದಲ್ಲಿಯೇ ಮೈಸೂರು ಪ್ರವಾಸಿಕೇಂದ್ರವನ್ನಾಗಿ ಮಾಡಬೇಕೆಂದುಕೊಂಡಿದ್ದೇನೆ. ಅದರಲ್ಲೂ ಮೈಸೂರು ಬ್ರಾಂಡ್ ಸ್ಥಾಪಿಸಲು ನಮ್ಮ ಹಿರಿಯರು ಶ್ರಮಿಸಿದ್ದಾರೆ. ಜತೆಗೆ ಈವರೆಗಿನ ಸಂಸದರಾದ ಪ್ರತಾಪಸಿಂಹ ಅವರು ಅಭಿವೃದ್ಧಿಗೆ ಅಡಿಪಾಯ ಹಾಕಿದ್ದಾರೆ. ಅದನ್ನು ಪಕ್ಷದ ಹಿರಿಯರ ಮಾರ್ಗದರ್ಶನದ ಮೂಲಕ ಮುಂದುವರೆಸಿಕೊಂಡು ನನ್ನ ಆದ್ಯ ಕರ್ತವ್ಯ ಆಗಲಿದೆ ಎಂದರು.
ರಾಜಕೀಯದ ಖಾರ ತಿನ್ನುವೆ
ಊಟದಲ್ಲಿ ಆಗೊಮ್ನೆ ಈಗೊಮ್ಮೆ ಮೆಣಸಿನಕಾಯಿ ಸಿಗಬಹುದು. ಆದರೆ, ರಾಜಕೀಯದಲ್ಲಿ ಪ್ರತಿನಿತ್ಯವು ಖಾರ ಇರಲಿದೆ ಎಂಬುದು ಗೊತ್ತಿದೆ. ಅದನ್ನು ತಿನ್ನುವ ಸವಾಲು ಸ್ವೀಕರಿಸಲು ಸಿದ್ಧನಾಗಿಯೇ ಬಂದಿರುವೆ ಎಂದು ಯಧುವೀರಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಶಾಸಕ ಶ್ರೀವತ್ಸ, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಚುನಾವಣಾ ಉಸ್ತುವಾರಿ ಮೈ.ವಿ.ರವಿಶಂಕರ್, ಮುಖಂಡರಾದ ಹೇಮಂತ್ ಕುಮಾರ್ ಗೌಡ, ಕೃಷ್ಣಪ್ಪಗೌಡ, ಶ್ರೀನಿವಾಸ್ ಗೌಡ, ಪ್ರಧಾನ ಕಾರ್ಯದರ್ಶಿ ಗಿರಿಧರ್, ಮಾದ್ಯಮ ವಕ್ತಾರರಾದ ಮಹೇಶ್ ರಾಜೇ ಅರಸ್, ಕೇಬಲ್ ಮಹೇಶ್, ಕೆ.ವಸಂತಕುಮಾರ್, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಪಣೀಶ್, ವಿಧಾನಪರಿಷತ್ ಮಾಜಿ ಸದಸ್ಯ ಸಿದ್ಧರಾಜು, ಶ್ರೀನಿವಾಸ್ ಸೇರಿ ಅನೇಕರು ಉಪಸ್ಥಿತರಿದ್ದರು.