ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ: ಶಾಸಕ ಹೆಚ್.ಟಿ.ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.15: 15 ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗಿರುವ ಹಣವನ್ನು ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಿ ಮೀಸಲಿಡುವಂತೆ ಶಾಸಕ ಹೆಚ್.ಟಿ.ಮಂಜು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯತಿ ಆವರಣದಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಟಾಸ್ಕ್ ಪೆÇೀರ್ಸ್ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ತಾಲೂಕಿನ ಎಲ್ಲಾ 34 ಗ್ರಾಮ ಪಂಚಾಯತಿಗಳ ಕುಡಿಯುವ ನೀರಿನ ಸಮಸ್ಯೆಗಳು ಮತ್ತು ಅದಕ್ಕೆ ಕೈಗೊಂಡಿರುವ ಪರಿಹಾರೋಪಾಯಗಳ ಸಮಗ್ರ ಪರಿಶೀಲನೆ ನಡೆಸಿದ ಶಾಸಕರು ಈಗಾಗಲೇ ಕ್ಷೇತ್ರದಲ್ಲಿ ಬಿರು ಬೇಸಿಗೆಯ ದಿನಗಳು ಆರಂಭವಾಗಿವೆ. ಬಿಸಿಲಿನ ಜಳ ಹೆಚ್ಚಿದ್ದು ಅಂತರ್ಜಲ ಮಟ್ಟ ಕುಸಿತವಾಗುತ್ತಿದೆ. ಇಂತಹ ಕಠಿಣ ಸನ್ನಿವೇಶದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ದಿನದ 24 ಘಂಟೆಗಳ ಕಾಲವೂ ಎಚ್ಚರಿಕೆ ವಹಿಸಬೇಕು. ಅಗತ್ಯವಿರುವ ಕಡೆ ಹೊಸ ಬೋರ್ ವೆಲ್ ಕೊರೆಸಲು ಕ್ರಮ ವಹಿಸಬೇಕು. ಗ್ರಾಮೀಣ ಕುಡಿಯುವ ನೀರು ಪೂರೈಕೆ ಮಾಡುವ ಕೊಳವೆ ಬಾವಿಗಳು ಸ್ಥಗಿತಗೊಂಡಿದ್ದರೆ ಖಾಸಗಿ ಕೊಳವೆ ಬಾವಿಗಳ ಮಾಲೀಕರನ್ನು ಸಂಪರ್ಕಿಸಿ ಅವರೊಂದಿಗೆ ಮಾತುಕತೆ ನಡೆಸಿ ಕುಡಿಯುವ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಅಗತ್ಯ ಬಿದ್ದರೆ ಖಾಸಗಿ ಕೊಳವೆ ಬಾವಿಗಳನ್ನು ವಶಕ್ಕೆ ಪಡೆದಾದರೂ ಗ್ರಾಮೀಣ ಪ್ರದೇಶದ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಬೇಕೆಂದು ಶಾಸಕ ಹೆಚ್.ಟಿ.ಮಂಜು ಸೂಚಿಸಿದರು.
ಸೆಸ್ಕಾಂ ಅಸಹಕಾರ: ಅನಿಯಮಿತ ಲೋಡ್ ಶೆಡ್ಡಿಂಗ್ ಆಗುತ್ತಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಕೆಲವು ಕಡೆ ಕೊರೆಸಲಾಗಿರುವ ಹೊಸ ಕೊಳವೆ ಬಾವಿಗಳಿಗೆ ವಿದ್ಯುತ್ ಇಲಾಖೆ ಸಂಪರ್ಕ ನೀಡುತ್ತಿಲ್ಲ. ಟಿ.ಸಿ ಸುಟ್ಟು ಹೋದರೆ ಅಥವಾ ಜಂಪ್ ಹೋದರೆ ಅದನ್ನೂ ವಿದ್ಯುತ್ ಇಲಾಖೆ ಸಕಾಲಕ್ಕೆ ಸರಿಪಡಿಸುತ್ತಿಲ್ಲ ಎಂದು ಸಭೆಯಲ್ಲಿ ಬಹುತೇಕ ಪಿ.ಡಿ.ಓಗಳು ಕುಡಿಯುವ ನೀರು ಪೂರೈಕೆಗೆ ಆಗುತ್ತಿರುವ ವಿದ್ಯುತ್ ಅಡಚಣೆಯ ಬಗ್ಗೆ ಪ್ರಸ್ತಾಪಿಸಿದರು. ಕುಡಿಯುವ ನೀರಿನಂತಹ ಗಂಭೀರ ಸಭೆಗೆ ಸೆಸ್ಕಾಂ ವಿಭಾಗೀಯ ಕಛೇರಿಯ ಕಾರ್ಯಪಾಲಕ ಅಭಿಯಂತರೆ ವಿನುತ ಆಗಮಿಸಿರಲಿಲ್ಲ. ದೂರವಾಣಿಯ ಮೂಲಕ ಅವರನ್ನು ಸಂಪರ್ಕಿಸಿದ ಶಾಸಕರು ಕಾರ್ಯಪಾಲಕ ಅಭಿಯಂತರೆ ವಿನುತ ಅವರನ್ನು ತರಾಟೆಗೆ ತೆಗೆದುಕೊಂಡರು. ತಾಲೂಕು ಮಟ್ಟದ ಯಾವುದೇ ಸಭೆಗಳಿಗೂ ನೀವು ಬರುತ್ತಿಲ್ಲ. ಸಭೆಗೆ ಬಾರದಿದ್ದರೆ ನಿಮಗೆ ಜನರ ಸಮಸ್ಯೆಗಳ ಬಗ್ಗೆ ಅರಿವು ಬರುವುದಾದರೂ ಹೇಗೆ? ನಿಮ್ಮ ಕಾರ್ಯವೈಖರಿಯನ್ನು ಸರಿಪಡಿಸಿಕೊಳ್ಳದಿದ್ದರೆ ನಿಮ್ಮ ಮೇಲಧಿಕಾರಿಗಳೊಂದಿಗೆ ವ್ಯವಹರಿಸಬೇಕಾಗುತ್ತದೆಂದು ಎಚ್ಚರಿಸಿದ ಶಾಸಕರು ಯಾವುದೇ ಕಾರಣಕ್ಕೂ ಕುಡಿಯುವ ನೀರು ಪೂರೈಕೆ ಘಟಕಗಳಿಗೆ ವಿದ್ಯುತ್ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.
ತಾಲೂಕಿನಲ್ಲಿ 220 ಮಿನಿ ವಾಟರ್ ಸಪ್ಲೆ ಘಟಕಗಳಿದ್ದು ಇದರಲ್ಲಿ 192 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 29 ಘಟಕಗಳು ರಿಪೇರಿಯಾಗಬೇಕಾಗಿದೆ. 436 ಮೇಜರ್ ವಾಟರ್ ಪೂರೈಕೆ ಘಕಟಗಳಿದ್ದು 374 ಘಟಕಗಳು ಕಾರ್ಯನಿರ್ವಹಿಸುತ್ತಿದ್ದರೆ 62 ಘಟಕಗಳು ರಿಪೇರಿಯಲ್ಲಿವೆ. 861 ಕೈ ಪಂಪ್‍ಗಳಿದ್ದು ಇದರಲ್ಲಿ 343 ಕೈ ಪಂಪುಗಳು ಕಾರ್ಯನಿರ್ವಹಿಸುತ್ತಿದ್ದರೆ 518 ಕೈ ಪಂಪುಗಳು ಸ್ಥಗಿತಗೊಂಡಿವೆ. ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಹಲವಾರು ಗ್ರಾಮಗಳಳ್ಲಿ ಕೊಳವೆ ಬಾವಿಗಳು ಸ್ಥಗಿತಗೊಂಡಿದ್ದು ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಗತ್ಯವಿರುವೆಡೆ ಜಲ ಜೀವನ್ ಮಿಷನ್ ಯೋಜನೆಯ ಮೂಲಕ ಕೊಳಬೆ ಬಾವಿಗಳನ್ನು ಕೊರೆಸಲಾಗುತ್ತಿದೆ. ಜೆ.ಜೆ.ಎಂ ಮೂಲಕ 95 ಕೊಳವೆ ಬಾವಿಗಳನ್ನು ಹೊಸದಾಗಿ ಕೊರೆಸಲಾಗಿದ್ದು ಇದರಲ್ಲಿ 50 ಕೊಳವೆ ಬಾವಿಗಳಲ್ಲಿ ಮಾತ್ರ ನೀರು ಬಂದಿದೆ. ಉಳಿದ 45 ಬಾವಿಗಳು ವಿಫಲವಾಗಿವೆ. ಬಿರು ಬೇಸಿಗೆಯಾಗಿದ್ದು ಹೊಸದಾಗಿ ತುರ್ತು ಕೊಳವೆ ಬಾವಿಗಳನ್ನು ತೆಗೆಸಲು ಬೋರ್ ವೆಲ್ ಕೊರೆಯುವ ಲಾರಿಗಳೂ ಸಿಗುತ್ತಿಲ್ಲ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಟ್ಟು ಹೋದ ಮೋಟಾರುಗಳನ್ನು ಬಿಸಾಡಿ ಹೊಸದಾಗಿ ಮೋಟರ್ ಖರೀದಿಸುವ ಬದಲು ಹಳೆಯ ಮೋಟಾರುಗಳನ್ನು ರೀವೈಂಡಿಂಗ್ ಮಾಡಿಸಿ ತುರ್ತು ಸಂದರ್ಭದಲ್ಲಿ ಬಳಕೆ ಮಾಡುವತ್ತ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಕ್ರಮವಹಿಸುವಂತೆ ಸಭೆಯಲ್ಲಿ ಸೂಚಿಸಿದ ಶಾಸಕ ಹೆಚ್.ಟಿ.ಮಂಜು ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ವಹಿಸುವಂತೆ ನಿರ್ದೇಶಿಸಿದರು.
ಶಾಸಕ ಹೆಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಟಾಸ್ಕ್ ಪೆÇೀರ್ಸ್ ಸಭೆಯಲ್ಲಿ ತಹಸೀಲ್ದಾರ್ ನಿಸರ್ಗ ಪ್ರಿಯ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಬಿ.ಎಸ್.ಸತೀಶ್, ಜಿ.ಪಂ ಕುಡಿಯುವ ನೀರು ಪೂರೈಕೆ ಯೋಜನೆಯ ಅಧಿಕಾರಿ ರಶ್ಮಿ, ತಾ.ಪಂ ಅಧಿಕಾರಿ ಡಾ. ನರಸಿಂಹರಾಜು, ತಾಲೂಕು ಯೋಜನಾಧಿಕಾರಿ ಶ್ರೀನಿವಾಸ್ ಸೇರಿದಂತೆ ಎಲ್ಲಾ 34 ಗ್ರಾಮ ಪಂಚಾಯತಿಗಳ ಪಿ.ಡಿ.ಓ ಗಳು ಸಭೆಯಲ್ಲಿ ಭಾಗವಹಿಸಿದ್ದರು.