ಸ್ಥಳೀಯರಿಗೆ ಟಿಕೆಟ್ ನೀಡುವ ಮೂಲಕ ಪ್ರಸಾದ್ ಕುಟುಂಬದ ಕಪಿಮುಷ್ಟಿಯಿಂದ ವಿಮೋಚನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ. 15- ಕಳೆದ 44 ವರ್ಷಗಳಿಂದ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಕುಟುಂಬದ ಕಪಿಮುಷ್ಠಿಯಲ್ಲಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಸ್ಥಳೀಯರಿಗೆ ಟಿಕೆಟ್ ನೀಡುವ ಮೂಲಕ ಕುಟುಂಬದಿಂದ ವಿಮೋಚನೆಗೊಳಿಸಿರುವುದು ತುಂಬಾ ಸಂತಸ ಉಂಟು ಮಾಡಿದೆ ಎಂದು ಹಿರಿಯ ಬಿಜೆಪಿ ಮುಖಂಡ ವೆಂಕಟರಮಣಸ್ವಾಮಿ (ಪಾಪು) ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ವಿ. ಶ್ರೀನಿವಾಸಪ್ರಸಾದ್ ಮತ್ತು ಅವರ ಕುಟುಂಬವು ಕಳೆದ 44 ವರ್ಷಗಳಿಂದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ತಮ್ಮದೇ ಹಿಡಿತವನ್ನು ಸಾದಿಸುವ ಜೊತೆಗೆ ರಾಜಕಾರಣದಲ್ಲಿ ಕುಟುಂಬದ ಅಧಿಪತ್ಯವನ್ನು ಸ್ಥಾಪಿಸಿದ್ದರು. ಈ ಬಾರಿ ಬಿಜೆಪಿಯಿಂದ ಅಳಿಯ ಡಾ. ಮೋಹನ್ ಅವರಿಗೆ ಟಿಕೆಟ್ ಕೊಡಿಸಲು ಸತತ ಪ್ರಯತ್ನ ಮಾಡಿದ್ದರು, ವರಿಷ್ಟರ ಮಟ್ಟದಲ್ಲಿ ದೊಡ್ಡ ಲಾಭಿ ಮಾಡಿದ್ದ ಪ್ರಸಾದ್ ಅಳಿಯನಿಗೆ ಟಿಕೆಟ್ ಕೈ ತಪ್ಪಿ ತೀವ್ರ ಮುಖಭಂಗ ಉಂಟು ಮಾಡಿದೆ.
ಈ ಬಾರಿ ಬಿಜೆಪಿ ವರಿಷ್ಟರು ನಮ್ಮ ಸ್ಥಳಿಯ ನಾಯಕರ ಮನವಿಯನ್ನು ಪುರಸ್ಕøರಿಸಿ, ಚಾ.ನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಸ್ಥಳೀಯರು ಆದ ಮಾಜಿ ಶಾಸಕ ಎಸ್. ಬಾಲರಾಜು ಅವರಿಗೆ ನೀಡುವ ಮೂಲಕ ಕ್ಷೇತ್ರದಲ್ಲಿ ಪ್ರಸಾದ್ ಹಿಡಿತ ಇಲ್ಲ ಎಂಬುವುದನ್ನು ತೋರ್ಪಡಿಸಿದೆ. ಹೀಗಾಗಿ ಪ್ರಧಾನಿ ಮೋದಿ ಅವರ ವರ್ಚಸ್ಸು, ಬಿಜೆಪಿ ಸಂಘಟನೆಯಿಂದಾಗಿ ಮತ್ತೊಮ್ಮೆ ಕ್ಷೇತ್ರದಲ್ಲಿ ಬಿಜೆಪಿ ಜಯ ಗಳಿಸಲಿದೆ. ನಾವೆಲ್ಲರು ಸೇರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಪ್ರಧಾನಿ ಮೋದಿ ಸರ್ಕಾರ ಸಂಸದರಾಗಿದ್ದುಕೊಂಡು ಒಂದೇ ಒಂದು ಹೊಸ ಯೋಜನೆಯನ್ನು ಜಾರಿ ಮಾಡದ ಪ್ರಸಾದ್, ರಾಷ್ಟ್ರೀಯ ಹಬ್ಬಗಳು, ಮಹಾಪುರುಷರ ಜಯಂತಿಗಳಿಗೂ ಸಹ ಭಾಗವಹಿಸದೇ ಅನಾರೋಗ್ಯ ಕಾರಣ ಹೇಳಿ ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿದ್ದರು. ಈಗ ಮತ್ತೇ ನನ್ನ ಅಳಿಯ ಡಾ. ಮೋಹನ್‍ಗೆ ಟಿಕೆಟ್ ಕೊಡಿ ಎಂದು ಲಾಬಿ ಮಾಡಿದ್ದರು. ಈ ಬಾರಿ ವರಿಷ್ಠರು ಸ್ಥಳಿಯರಿಗೆ ಮಣೆ ಹಾಕಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಇತ್ತೀಚಿನ ಬೆಳವಣೆಗೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿರುವ ಡಾ. ಮೋಹನ್ ಅವರು ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಎಂಬ ಮಾಹಿತಿ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ಕಾಂಗ್ರೆಸ್‍ನಿಂದ ಟಿಕೆಟ್ ನೀಡುವಂತೆ ಕೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರು ಸಹ ಸ್ಥಳೀಯರಿಗೆ ಅದ್ಯತೆ ನೀಡಬೇಕು ಎಂದು ಪಾಪು ಮನವಿ ಮಾಡಿದರು.
ಗೋಷ್ಠಿಯಲ್ಲಿ ಮುಖಂಡರಾದ ಮುತ್ತಿಗೆ ಮೂರ್ತಿ, ಶಿವರುದ್ರಸ್ವಾಮಿ, ಅಸ್ಲಂಷರೀಪ್ ಇದ್ದರು.