ನರೇಗಾದಡಿ ಕೆಲಸ ಕೊಡುತ್ತೇವೆ, ಯಾರೂ ಗುಳೇ ಹೋಗಬೇಡಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ ಮಾ. ೧೫; ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದ್ದು, ಕೂಲಿ ಕೆಲಸ ಅರಸಿಕೊಂಡು, ಯಾರೂ ಕೂಡ ಗುಳೇ ಹೋಗಬೇಡಿ, ನರೇಗಾ ಯೋಜನೆಯಡಿ ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೇ ಕೂಲಿ ಕೆಲಸ ಕೊಟ್ಟು, ಸಕಾಲದಲ್ಲಿಯೇ ಕೂಲಿ ಹಣ ನೀಡುತ್ತೇವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಹೇಳಿದರು.ಹೊಳಲ್ಕೆರೆ ತಾಲ್ಲೂಕು ಹಿರೇ ಎಮ್ಮಿಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಕಲ್ಯಾಣಿ ಅಭಿವೃದ್ಧಿ, ಗ್ರಾಮೀಣ ಉದ್ಯಾನವನ, ಚರಂಡಿ, ರಸ್ತೆ ಕಾಮಗಾರಿಗಳನ್ನು ಗುರುವಾರ ವೀಕ್ಷಿಸಿ, ಬಳಿಕ ಅವರು ಮಾತನಾಡಿದರು.ಮಳೆಯ ಕೊರತೆಯಿಂದಾಗಿ ಈ ಬಾರಿ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದೆ.  ಸರ್ಕಾರದ ನಿರ್ದೇಶನದಂತೆ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಈಗಾಗಲೆ ನರೇಗಾ ಯೋಜನೆಯಡಿ ಕೂಲಿ ಆಧಾರಿತ ಕಾಮಗಾರಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಂಡಿದ್ದೇವೆ.  ಉದ್ಯೋಗವನ್ನು ಅರಸಿಕೊಂಡು ಯಾರೂ ಕೂಡ ಗುಳೇ ಹೋಗಬಾರದು, ತಮ್ಮ ತಮ್ಮ ಗ್ರಾಮಗಳಲ್ಲಿಯೇ ನರೇಗಾದಡಿ ನೀಡುವ ಉದ್ಯೋಗವನ್ನು ನೀಡುತ್ತೇವೆ.  ಕೆಲಸ ಅಗತ್ಯವಿರುವವರು ಕೂಡಲೆ ಸಂಬಂಧಿಸಿದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ತಿಳಿಸಬೇಕು.  ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೇ ಕೂಲಿ ಕೆಲಸ ನೀಡುತ್ತೇವೆ, ಅಲ್ಲದೆ ಸಕಾಲಕ್ಕೆ ಕೂಲಿ ಹಣವನ್ನು ಕೂಡ ಪಾವತಿಸಲಾಗುವುದು.  ಗ್ರಾಮೀಣ ಭಾಗದ ಮಹಿಳಾ ಕೂಲಿಕಾರರು ಹೆಚ್ಚು ಹೆಚ್ಚು ನರೇಗಾ ಯೋಜನೆಯ ಸದ್ಬಳಕೆ ಮಾಡಿಕೊಂಡು, ಬರ ಪರಿಸ್ಥಿತಿಯಲ್ಲಿಯೇ ಆರ್ಥಿಕವಾಗಿ ಸದೃಢರಾಗಬೇಕು.  ಅಧಿಕಾರಿಗಳು ನರೇಗಾ ಯೋಜನೆ ಅನುಷ್ಠಾನಗೊಳಿಸುವಾಗ 60 : 40 ಅನುಪಾತವನ್ನು ತಪ್ಪದೆ ಪಾಲಿಸಬೇಕು, ಈ ಮೂಲಕ ಇನ್ನೂ ಹೆಚ್ಚು ಉತ್ತಮ ಗುಣಮಟ್ಟದ ಆಸ್ತಿಗಳ ಸೃಜನೆಯನ್ನು ಮಾಡಬೇಕು ಎಂದು ಸಿಇಒ ಸೋಮಶೇಖರ್ ಹೇಳಿದರು.ನಂತರ ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಿರ್ವಹಿಸುತ್ತಿರುವ ಕೂಸಿನ ಮನೆಗೆ ಭೇಟಿ ನೀಡಿದ ಅವರು, ಮಕ್ಕಳಿಗೆ ಸರಿಯಾದ ಸಮಯಕ್ಕೆ ಆಹಾರ ವಿತರಣೆ ಆಗಬೇಕು, ಗುಣಮಟ್ಟದ ಆಹಾರ ಮತ್ತು ಕುಡಿಯುವ ನೀರನ್ನು ಪೂರೈಸಬೇಕು, ಮತ್ತು ಮಕ್ಕಳ ಆರೋಗ್ಯವನ್ನು ತುಂಬಾ ಜಾಗರೂಕತೆಯಿಂದ ಕಾಳಜಿ ವಹಿಸಿ ನೋಡಿಕೊಳ್ಳುವಂತೆ ಕೂಸಿನ ಮನೆ ನಿರ್ವಾಹಕರಿಗೆ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 7 ಗ್ರಾಮಗಳಿದ್ದು ಕಡೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಗ್ರಾಮಸ್ಥರು ಇದೇ ಸಂದರ್ಭದಲ್ಲಿ ಸಿಇಒ ಅವರ ಗಮನಕ್ಕೆ ತಂದರು.  ಸ್ಪಂದಿಸಿದ ಸಿಇಒ ಅವರು, ಅತ್ಯಂತ ತುರ್ತಾಗಿ ಸ್ಥಳೀಯ ಖಾಸಗಿ ಬೋರ್‍ವೇಲ್ ಬಾಡಿಗೆಗೆ ಪಡೆದು ಸಾರ್ವಜನಿಕರಿಗೆ ಕುಡಿಯುವ ನೀರನ ಸಮಸೆಯನ್ನು ಪರಿಹರಿಸುವಂತೆ ಸೂಚಿಸಿದರು