ದಾವಣಗೆರೆ ಕ್ರಿಕೆಟ್ ಅಕಾಡೆಮಿಯಲ್ಲಿ ಅತ್ಯಾಧುನಿಕ ಬೌಲಿಂಗ್ ಮೆಷನ್ ಅಳವಡಿಕೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೧೪: ದಾವಣಗೆರೆ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ಕಲಿಯುವ ಹಾಗೂ ಆಸಕ್ತಿ ಇರುವ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿ ಎಂದು ಲಿವರೇಜ್ ಯಂತ್ರ ಎನ್ನುವ ಕಂಪನಿಯ ಆಧುನಿಕ ಬೌಲಿಂಗ್ ಮೆಷಿನ್ ಅನ್ನು ಅಳವಡಿಸಲಾಗಿದ್ದು, ಮಧ್ಯ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇಂತಹ ಒಂದು ಬೌಲಿಂಗ್ ಮೆಷಿನ್ ಅನ್ನು ಪರಿಚಯಿಸಿದ ಹಿರಿಮೆ ದಾವಣಗೆರೆ ಕ್ರಿಕೆಟ್ ಅಕಾಡೆಮಿಗೆ ಸಲ್ಲುತ್ತದೆ ಎಂದು ಅಕಾಡೆಮಿ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಅನೇಕ ಕ್ರಿಕೆಟ್ ಸ್ಟಾರ್‌ಗಳು ಈ ಯಂತ್ರವನ್ನು ತಮ್ಮ ಸ್ವಂತ ಅಭ್ಯಾಸಕ್ಕಾಗಿ ಬಳಸುತ್ತಿದ್ದು, ದಾವಣಗೆರೆ ಕ್ರಿಕೆಟ್ ಅಕಾಡೆಮಿಯ ಮಕ್ಕಳಿಗೆ ಇದು ಅಭ್ಯಾಸಕ್ಕೆ ಸಿಗುತ್ತಿರುವುದು ಅದೃಷ್ಟವೇ ಸರಿ ಎಂದರು.ಸುಮಾರು ಮೂರುವರೆ ಲಕ್ಷ ಬೆಲೆ ಬಾಳುವ ಈ ಬೌಲಿಂಗ್ ಮೆಷಿನ್ ವಿವಿಧ ವೇಗದಲ್ಲಿ ಹಾಗೂ ವಿವಿಧ ಸ್ಪಿನ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದು, ಕ್ರಿಕೆಟ್ ಪಟುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಕ್ರಿಕೆಟ್ ಕೋಚ್ ಆರ್.  ತಿಮ್ಮೇಶ್  ಅವರ ಬಹುದಿನದ ಆಸೆ ಈಗ ಈಡೇರಿದಂತಾಗಿದೆ ಎಂದು ಹೇಳಿದರು.ಮಾ. 16 ರಂದು ಮಧ್ಯಾಹ್ನ 2-30 ಗಂಟೆಗೆ  ಬೌಲಿಂಗ್ ಮಷಿನ್ ಉದ್ಘಾಟನೆಯನ್ನು  ಸಚಿವ  ಎಸ್.ಎಸ್.  ಮಲ್ಲಿಕಾರ್ಜುನ್‌ ನೆರವೇರಿಸಲಿದ್ದಾರೆ. ಅಕಾಡೆಮಿಯ ಮಕ್ಕಳಿಗಾಗಿ ಈ ಯಂತ್ರವನ್ನು ತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇತರೆ ಆಟಗಾರರೂ ಬಳಸಲುಶುಲ್ಕ ನಿಗದಿ ಮಾಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ, ಅಕಾಡೆಮಿಯ ಕೋಚ್  ತಿಮ್ಮೇಶ್,  ಗೋಪಾಲಕೃಷ್ಣ, ಬಿ. ರಮೇಶ್‌ನಾಯ್ಕ, ಬಿ. ಬಸವರಾಜ್, ಉಮೇಶ್ ಸಿರಿಗೆರೆ, ಯುವರಾಜ್ ಹಾಗೂ  ಪ್ರದೀಪ್ ಉಪಸ್ಥಿತರಿದ್ದರು.