ಗಾಂಧೀಜಿ ಕನಸುಗಳು ಸಾಕಾರಗೊಳ್ಳಬೇಕಿದೆ:ಪಾರ್ವತಿ ಕುರ್ಲೆ
ವಿಜಯಪುರ,ಅ.4: ಸರಳ ಜೀವನ, ಗ್ರಾಮ ಸ್ವರಾಜ್ಯ, ಉಪ್ಪಿನ ಸತ್ಯಾಗ್ರಹ, ಗುಡಿ ಕೈಗಾರಿಕೆ, ಚರಕ ನೂಲು, ಕೊಮು ಸೌಹಾರ್ದದ ಮೂಲಕ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಹಾಗೂ ಈ ಮೂಲಕ ಮಹಾತ್ಮರೆನಿಸಿಕೊಂಡ ಗಾಂಧೀಜಿಯ ಕನಸುಗಳು ಇಂದು ಎಂದೆಂದಿಗೂ ಸಾಕಾರಗೊಳ್ಳಬೇಕಿದೆ ಎಂದು ಧಾರವಾಡ ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯೆ ಪಾರ್ವತಿ ಕುರ್ಲೆ ಹೇಳಿದರು.
ನಗರದ ಹೊರ ಹೊಲಯದ ಹಿಟ್ಟಿನಹಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಜರುಗಿದ ಮಹಾತ್ಮ ಗಾಂಧೀಜಿಯವರ 155ನೇ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರೀಜಿಯವರ 125ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವಕರು ಓದಿ ನೌಕರಿ ಪಡೆದು ಹಣ ಗಳಿಸುವ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾರೆ, ಕೃಷಿ ವಿಜ್ಞಾನಿಗಳು ನಿವೃತ್ತಿ ನಂತರ ರೈತರ ಏಳಿಗೆ, ಕೃಷಿ ಉತ್ಪಾದನೆ ಕುರಿತು ಚಿಂತಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ, ಗಾಂಧಿ ಚಿಂತಕ ಎಂ. ಜಿ. ಯಾದವಾಡ ಮಾತನಾಡಿ, ಗಾಂಧೀಜಿಯವರು ಸತ್ಯ, ಶಾಂತಿ ಅಹಿಂಸೆ ತತ್ವದ ಅಡಿಪಾಯದಲ್ಲಿ ಉಪವಾಸ ಮೂಲಕ ಜನಾಂದೋಲನ ರೂಪಿಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಲಾಲ್‍ಬಹದ್ದೂರ್ ಶಾಸ್ತ್ರೀಜಿಯವರು ಜೈ ಜವಾನ್ ಜೈಕಿಸಾನ್ ಮೂಲಕ ಈ ದೇಶ ಕಾಯುವ ಸೈನಿಕ ಹಾಗೂ ದೇಶಕ್ಕೆ ಅನ್ನ ನೀಡುವ ರೈತರನ್ನು ಎಂದೆಂದಿಗೂ ನೆನೆಯುವಂತೆ ಮಾಡಿದ ಸಾಕಾರ ಮೂರ್ತಿ ಎಂದರು. ಇಂದು ಪ್ರತಿಯೊಬ್ಬರು ಕೌಟುಂಬಿಕ ಋಣ, ಸಮಾಜದ ಋಣ ಮತ್ತು ದೇಶದ ಋಣವನ್ನು ತೀರಿಸಲು ಸಂಕಲ್ಪಮಾಡಬೇಕಾಗಿದೆ ಎಂದರು.
ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಎಸ್. ಸಜ್ಜನ ಹಾಗೂ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಗಾಂಧೀಜಿಯವರು ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರೀಯವರು ಸ್ಪಷ್ಟವಾದ ಗುರಿಯೊಂದಿಗೆ ಭಾರತದ ಸ್ವಾತಂತ್ರ್ಯ ಚಳುವಳಿಯ ಮುಂಚೂಣಿಯಲ್ಲಿ ನಿಂತು, ಮಾಗದರ್ಶನ ಮಾಡುತ್ತಾ, ಬೆಳೆದ ದೂರದೃಷ್ಠಿಯ ಹರಿಕಾರರು ಹಾಗೂ ಗಾಂಧೀಜಿಯವರು ಅಗಿನ ಅಡಳಿತದೊಂದಿಗೆ ಪತ್ರ ವ್ಯವಹಾರ, ಕಾನೂನು ಸಮರ, ಚರ್ಚೆ, ಪತ್ರಿಕಾ ಲೇಖನ, ಮುಷ್ಕರ ರೂಪಿಸಿದ ಮಾನವೀಯ ಕಾಳಜಿಯ ಶ್ರಮಜೀವಿಗಳಾಗಿದ್ದರು ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಡೀನ್ ಡಾ. ಎ. ಬೀಮಪ್ಪ ಮಾತನಾಡಿ, ಇರ್ವ ಮಹನೀಯರು ದೇಶ ಸ್ವಾತಂತ್ರ್ಯವಾಗಲು ಮತ್ತು ದೇಶ ಸೇವೆಗೈಯಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಗಾಂಧೀಜಿಯವರು ಸ್ವಚ್ಚತೆಯನ್ನು ಸೇವೆ ಎಂದು ಪರಿಗಣಿಸಿ ಅದಕ್ಕೆ ಹೆಚ್ಚು ಒತ್ತು ನೀಡಿದ್ದರು. ಸಾರ್ವಜನಿಕ ಸ್ವಚ್ಚತೆಯ ಮಹತ್ವವನ್ನು ಸಾರಿದರು. ಈ ನಿಟ್ಟಿನಲ್ಲಿ ಸ್ವಚ್ಚತೆಯೇ ಸೇವೆ ಅಭಿಯಾನವನ್ನು ಕೃಷಿ ಮಹಾವಿದ್ಯಾಲಯದಲ್ಲಿ ಆರಂಭಿಸಿ, ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಮಯದಲ್ಲಿ ಎಲ್ಲರಿಗೂ ಸ್ವಚ್ಚತೆಯ ಸಾಮೂಹಿಕ ಪ್ರತಿಜ್ಞಾ ವಿಧಿ ಭೋದಿಸಿದರು. ನಂತರದಲ್ಲಿ ಅವರಣದಲ್ಲಿ ಎಲ್ಲ ಗಣ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿ ಸ್ವಚ್ಚತಾ ಕಾರ್ಯ ಕೈಗೊಂಡರು. ಈ ಸಂದರ್ಭದಲ್ಲಿ ಡಾ. ಆರ್. ಬಿ. ಜೊಳ್ಳಿ, ಡಾ. ಎಸ್. ಎಚ್. ಗೊಟ್ಯಾಳ, ಡಾ. ಜಿ. ಶ್ರೀನಿವಾಸಲು, ಡಾ. ಎಸ್. ಜಿ. ಅಸ್ಕಿ, ಡಾ. ಎಂ. ವೈ. ತೆಗ್ಗಿ, ಡಾ. ಎಸ್. ಎಂ. ವಸ್ತ್ರದ, ಡಾ. ದಿನೇಶಕುಮಾರ, ಡಾ. ಪ್ರದೀಪಕುಮಾರ, ಎನ್. ಎಸ್. ಎಸ್. ಘಟಕದ ಡಾ. ಉಮರಪಾರೂಕ್ ಮೋಮಿನ್, ಡಾ. ಸಾವಿತ್ರಿ ಪಾಟೀಲ, ಡಾ. ಬಂಗಾರೆಮ್ಮ ಒಡೆಯರ, ಎಸ್. ಬಿ. ಇಂಗಳೇಶ್ವರ ಸೇರಿದಂತೆ ಆವರಣದ ಎಲ್ಲಾ ಬೋಧÀಕ, ಬೋಧÀಕೇತರ ಸಿಬ್ಬಂದಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.