ವಿಶ್ವವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಗೆ ಕವಿ ಸಂತೋಷಕುಮಾರ ಕರಹರಿ ಆಯ್ಕೆ
ಕಲಬುರಗಿ, ಅ.6- ವಿಶ್ವವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಗೆ ಕಲಬುರಗಿ ಜಿಲ್ಲೆಯಿಂದ ಕವಿ ಸಂತೋಷಕುಮಾರ ಎಸ್.ಕರಹರಿ ಅವರು ಆಯ್ಕೆಯಾಗಿದ್ದಾರೆ.
ಅ.9 ರಂದು ಬೆಳಿಗ್ಗೆ 10.30ಕ್ಕೆ ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಯ ಪಂಚ ಕಾವ್ಯೋತ್ಸವದ ಸಮೃದ್ಧ ಕವಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಕವಿತೆ ವಾಚಿಸಲಿದ್ದಾರೆ.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ.ಎಚ್.ಎಲ್. ಪುಷ್ಪಾ ಅವರು ಕವಿಗೋಷ್ಠಿ ಉದ್ಘಾಟಿಸಲಿದ್ದು, ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾದ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸುವರು. ಕರ್ಣಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪೆÇ್ರ.ಕವಿತಾ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮೈಸೂರು ದಸರಾ ಕವಿಗೋಷ್ಠಿಗೆ ಕಲಬುರಗಿ ಜಿಲ್ಲೆಯಿಂದ ಕವಿ ಸಂತೋಷಕುಮಾರ ಕರಹರಿ ಅವರು ಆಯ್ಕೆಯಾಗಿರುವುದಕ್ಕೆ ಹಿರಿಯ ಲೇಖಕ, ಖ್ಯಾತ ಕಾದಂಬರಿಕಾರ ಕುಂ.ವೀರಭದ್ರಪ್ಪ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಸಂತೋಷಕುಮಾರ ಎಸ್.ಕರಹರಿ ಅವರು ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದರೂ ಪ್ರವೃತ್ತಿಯಿಂದ ಕವಿ, ಕಲಾವಿದರಾಗಿ ಹೆಸರುವಾಸಿಯಾಗಿದ್ದಾರೆ. 2015ರಲ್ಲಿ ” ಒಲವಧಾರೆ” ಕವನ ಸಂಕಲನ, 2016ರಲ್ಲಿ ” ಬುದ್ಧಲೋಕ” ಕವನ ಸಂಕಲನ, 2020ರಲ್ಲಿ ” ಮಧುಬನಿ” ಹನಿಗವನ ಸಂಕಲನ ಮತ್ತು ಕಾವ್ಯ ಕಂಬನಿ ವಿಮರ್ಶಾ ಕೃತಿಯನ್ನು ಹೊರತಂದಿದ್ದಾರೆ. ತಮ್ಮದೇಯಾದ ಬುದ್ಧಾಂಕುರ ಪ್ರಕಾಶನ ಆರಂಭಿಸುವುದರ ಮೂಲಕ ಅನೇಕ ಜನ ಯುವ ಲೇಖಕರ ಕೃತಿಗಳನ್ನು ಪ್ರಕಟಿಸಿ ಅವರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದಾರೆ. ಅವರ ಅನೇಕ ಕವಿತೆ ಮತ್ತು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.