ಟ್ರ್ಯಾಕ್ಟರ್‍ನಲ್ಲಿದ್ದ ಮೇವಿನ ಕಣಕಿಗೆ ಬೆಂಕಿ
ಕಲಬುರಗಿ:ಮಾ.14: ವಿದ್ಯುತ್ ತಂತಿ ತಗುಲಿ ಟ್ರ್ಯಾಕ್ಟರ್‍ನಲ್ಲಿದ್ದ ಜೋಳದ ಮೇವಿನ ಕಣಕಿಗೆ ಬೆಂಕಿ ಹೊತ್ತಿಕೊಂಡ ಘಟನೆ ನಗರದ ಹೊರವಲಯದ ಫರತಾಬಾದ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿನ ಮೇಳಕುಂದಾ(ಬಿ) ಗ್ರಾಮದಲ್ಲಿ ವರದಿಯಾಗಿದೆ.
ಮೇವಿನ ಕಣಿಕೆಯು ಮಲ್ಲಿನಾಥ್ ಕೊಳ್ಳೂರ್ ಅವರಿಗೆ ಸೇರಿದ್ದಾಗಿತ್ತು. ಮಲ್ಲಿನಾಥ್ ಅವರು ಶಹಾಬಾದ್ ತಾಲ್ಲೂಕಿನ ಹೊನಗುಂಟಿ ಗ್ರಾಮದಲ್ಲಿ ಮೇವಿನ ಕಣಕಿ ಖರೀದಿಸಿದ್ದರು. ಬಳಿಕ ಒಂದೇ ಟ್ರ್ಯಾಕ್ಟರ್‍ನಲ್ಲಿ ಎರಡು ಟ್ರ್ಯಾಲಿಗಳಷ್ಟು ತುಂಬಿಕೊಂಡು ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಮೇಳಕುಂದಾ ಗ್ರಾಮದಲ್ಲಿನ ಬೀದಿ ಬದಿಯ ವಿದ್ಯುತ್ ತಂತಿ ತಗುಲಿ ಶಾರ್ಟ್ ಸಕ್ರ್ಯೂಟ್ ಆಗಿದ್ದರಿಂದ ಒಮ್ಮೆಲೆ ಕಣಕಿಗೆ ಬೆಂಕಿ ಹೊತ್ತಿ ಉರಿಯಲಾರಂಭಿಸಿತು.
ನೋಡು ನೋಡುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ಎರಡು ಟ್ರ್ಯಾಲಿ ಕಣಕಿಯು ಬೆಂಕಿಗೆ ಆಹುತಿಯಾಯಿತು. ಗ್ರಾಮಸ್ಥರು ಸೇರಿ ಬೆಂಕಿಯನ್ನು ಶಮಗನೊಳಿಸಲಾಗದೇ ಹತಾಶರಾಗಿ ನಿಂತು ನೋಡಿದರು. ನಂತರ ಅಗ್ನಿಶಾಮಕದಳದವರು ಸ್ಥಳಕ್ಕೆ ಧಾವಿಸಿ ಜಲ ಫಿರಂಗಿ ಮೂಲಕ ಬೆಂಕಿಯನ್ನು ಶಮನಗೊಳಿಸಿದರು. ಈ ಕುರಿತು ಫರತಾಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.