ಕಲಿಕೆ ನಿರಂತರ ಪ್ರಕ್ರಿಯೆ : ಪ್ರೊ. ದಯಾನಂದ ಅಗಸರ
ಕಲಬುರಗಿ:ಮಾ.14:ಜೀವನದಲ್ಲಿ ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಸಾಧನೆಗೆ ಸಕಾರಾತ್ಮಕ ಮನೋಭಾವ ಮುಖ್ಯ. ವಿದ್ಯಾರ್ಥಿಗಳ ಜೀವನ ಕೌಶಲ್ಯ ಅಭಿವೃದ್ಧಿಯಿಂದ ಕೂಡಿರಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ್ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಪರಿಹಾರತ್ಮಕ ತರಬೇತಿ ಕೇಂದ್ರದ ವತಿಯಿಂದ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಶೈಕ್ಷಣಿಕ ಮತ್ತು ವೃತ್ತಿ ಅಭಿವೃದ್ಧಿಗಾಗಿ ಪ್ರೇರಣಾತ್ಮಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಾಗಾರದಲ್ಲಿ ಸಿಗುವ ಉಪಯುಕ್ತ ಮಾಹಿತಿ ಹಾಗೂ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವ್ಯಕ್ತಿತ್ವ ವಿಕಾಸ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಪರಿಕಲ್ಪನೆ ಅಡಿಯಲ್ಲಿ ರೆಮಿಡಿಯಲ್ ತರಬೇತಿ ಕೇಂದ್ರದ ವತಿಯಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಸಹಕಾರಿ ಆಗಲೆಂದು ನಿರಂತರ ಶಿಬಿರಗಳನ್ನು ಆಯೋಜಿಸಲಾಗುವುದು ಎಂದರು.
ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಜಗನ್ನಾಥ ರಾವ್ ಮಾತನಾಡಿ ಜೀವನದಲ್ಲಿ ವಯಸ್ಸು ಮುಖ್ಯವಲ್ಲ, ಸಮಾಜಕ್ಕೆ ನಮ್ಮ ಕೊಡುಗೆ ಏನು ಎನ್ನುವುದು ಮುಖ್ಯ. ಜೀವನ ಮಾಡುತ್ತಾ ಹಣ ಗಳಿಸಿ, ಹಣದ ಹಿಂದೆ ಹೋಗಿ ಸಂತೋಷದ ಜೀವನ ಕಳೆದುಕೊಳ್ಳಬೇಡಿ. ನಿಮ್ಮ ಬಗ್ಗೆ ಮನಸಿನಲ್ಲಿ ಸಾಕಾರಾತ್ಮಕವಾಗಿ ಆಲೋಚಿಸಿ. ಇನ್ನೊಬ್ಬರ ನಕಾರಾತ್ಮಕ ಮಾತುಗಳಿಗೆ ಕಿವಿಗೊಡಬೇಡಿ ಎಂದರು.
ಸಾಧನೆ ಮಾಡುವತನಕ ಮೌನವಾಗಿ ಶ್ರಮಿಸಿ. ಮುಂದೆ ನಿಮ್ಮ ಸಾಧನೆ ಮಾತಾಡುವಂತಾಗಬೇಕು. ಆದರೆ ಸಾಧನೆ ಸುಲಭವಲ್ಲ. ಯಾವುದು ಜೀವನದಲ್ಲಿ ಸುಲಭವಾಗಿ ಸಿಗುವುದಿಲ್ಲ. ಅದೇ ರೀತಿ ಯಾವುದೂ ಜೀವನದಲ್ಲಿ ಅಸಾಧ್ಯವಿಲ್ಲ. ಗೆಲುವು ಪಡೆಯಲು ಸರಿಯಾದ ರೀತಿಯಲ್ಲಿ ಏಕಾಗ್ರತೆಯಿಂದ ಸತತವಾಗಿ ಪರಿಶ್ರಮ ವಹಿಸಬೇಕು. ಸರಿಯಾದ ಸಮಯಕ್ಕೆ ಕಾಯಬೇಕು ಎಂದರು.
ಕಾರ್ಯಕ್ರಮ ಸಂಚಾಲಕ ಡಾ. ಸುರೇಶ ಜಂಗೆ ಅತಿಥಿಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ಮತ್ತು ಸಾಧನೆಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ಪರಿಹಾರಾತ್ಮಕ ತರಬೇತಿ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗುವುದು. ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಮೌಲ್ಯಮಾಪನ ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ, ಸಿಂಡಿಕೇಟ್ ಸದಸ್ಯ ರಾಘವೇಂದ್ರ ಭೈರಪ್ಪ ಉಪಸ್ಥಿತರಿದ್ದರು.
ಸಂಗೀತ ವಿಭಾಗದ ಅತಿಥಿ ಉಪನ್ಯಾಸಕಿ ಡಾ. ಜಯ ದಾನಮ್ಮನವರ್ ಮತ್ತು ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿ, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು. ಡಾ. ಶುಲಾಬಾಯಿ ಹಿತವಂತ ನಿರೂಪಿಸಿದರು.