ನದಿಗಳು ಅಮೂಲ್ಯವಾದ ನೈಸರ್ಗಿಕ ಸಂಪತ್ತು
ಕಲಬುರಗಿ:ಮಾ.14: ಮಾನವನಿಗೆ ಅವಶ್ಯಕವಾಗಿ ಬೇಕಾಗುವ ನೀರನ್ನು ಪೂರೈಸುವ ನದಿಗಳು ಅಮೂಲ್ಯವಾದ ನೈಸರ್ಗಿಕ ಸಂಪತ್ತಾಗಿವೆ. ಮಳೆಯ ರೂಪದಲ್ಲಿ ಭೂಮಿಯ ಮೇಲೆ ಸುರಿಯುವ ನೀರನ್ನು ಶೇಖರಿಸಿ ಸುತ್ತ-ಮುತ್ತಲಿನ ಪ್ರದೇಶಗಳಿಗೆ ನೀರಾವರಿಯನ್ನು ಒದಗಿಸುತ್ತವೆ. ಪರಿಸರವನ್ನು ಸಮತೋಲ ಸ್ಥಿತಿಯಲ್ಲಿರಲು ನದಿಗಳ ಪಾತ್ರ ಪ್ರಮುಖವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ತಾಲೂಕಿನ ಖಾಜಾ ಕೋಟನೂರ ಕೆರೆಯ ದಂಡೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಸಂಜೆ ಜರುಗಿದ ‘ಅಂತಾರಾಷ್ಟ್ರೀಯ ನದಿಗಳ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ವಿಶ್ವದ ಅರ್ಧದಷ್ಟು ಜನರು ಕರಾವಳಿಯ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಜೀವನಾಧಾರವೆಂದರೆ ಕೆರೆ, ಸಮುದ್ರ, ಸಾಗರಗಳಾಗಿದ್ದು, ಪ್ರಮುಖ ಉದ್ಯೋಗವೆಂದರೆ ಮೀನುಗಾರಿಕೆಯಾಗಿದೆ. ಜೊತೆಗೆ ಉಪ್ಪು, ಚಿಪ್ಪು, ಮುತ್ತು, ವಜ್ರ, ವೈಡುರ್ಯ, ಪೆಟ್ರೋಲಿಯಂಗಳಂತಹ ಅಮೂಲ್ಯವಾದ ಸಂಪತ್ತನ್ನು ಒದಗಿಸಿಕೊಡುವ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುತ್ತವೆ. ಕೆರೆ, ನದಿಗಳು, ಸಾಗರ ಹಾಗೂ ಸಮುದ್ರಗಳನ್ನು ಮಲಿನಗೊಳಿಸದೆ ಸ್ವಚ್ಚತೆಯನ್ನು ಕಾಪಾಡಬೇಕು. ನದಿಗಳು ಜಲವಿದ್ಯುತ್ ಉತ್ಪಾದನೆ, ನೀರಾವರಿ, ಕುಡಿಯುವ ನೀರು, ಪ್ರವಾಹ ನಿಯಂತ್ರಣ, ಪ್ರವಾಸೋದ್ಯಮ ಸೇರಿದಂತೆ ಮುಂತಾದವುಗಳಿಗೆ ಸಹಕಾರಿಯಾಗಿದೆ ಎಂದರು.
ಮೀನುಗಾರ ಮಹಾವೀರ ಭೋವಿ ಮಾತನಾಡಿ, ಇಲ್ಲಿ ನಾವು ಮೀನುಗಾರಿಕೆಯ ಮೂಲಕ ಜೀವನ ಸಾಗಿಸುತ್ತಿದ್ದೇವೆ. ಕೆರೆಯ ದಡದಲ್ಲಿ ಹುಲ್ಲು, ಜೇಕು ಬೆಳೆದಿದೆ. ಸ್ವಚ್ಚತೆಗೆ ಕಾದಿದೆ. ಈ ಮೊದಲು ಮನರೆಗಾ ಅಡಿಯಲ್ಲಿ ಕೆರೆಯ ಕೆಲಸ ಮಾಡಲಾಗಿದೆ. ಮೀನುಗಳ ಮಾರಾಟ ವಿವಿಧ ಪ್ರದೇಶಗಳಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.
ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಮೀನುಗಾರರ ಪ್ರಮುಖರಾದ ಸುಲೋಮನ್, ಲಕ್ಷ್ಮೀ, ಎಸ್ಟರಿನ್, ಪ್ರಶಾಂತಿ ಸೇರಿದಂತೆ ಮತ್ತಿತರರಿದ್ದರು.