ಗೌರವ ಡಾಕ್ಟರೇಟ್ ಮಹಿಳೆಯರಿಗೆ ಸಂದ ಗೌರವ
ಕಲಬುರಗಿ:ಮಾ.14: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ನೀಡಿರುವ ಗೌರವ ಡಾಕ್ಟರೇಟ್ ಪ್ರಶಸ್ತಿಯು ಸ್ತ್ರೀಯರಿಗೆ ಸಂದ ಗೌರವವಾಗಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್ ಪೂಜ್ಯ ಡಾ.ದಾಕ್ಷಾಯಣಿ ಎಸ್.ಅಪ್ಪ ಹೇಳಿದರು.
ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಿಳಾ ಮಹಾವಿದ್ಯಾಲಯ ಮತ್ತು ಗೋದುತಾಯಿ ದೊಡ್ಡಪ್ಪ ಅಪ್ಪ ಬಿ.ಎಡ್ ಮಹಾವಿದ್ಯಾಲಯ ಗುರುವಾರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಇತ್ತೀಚಿಗೆ ತಮಗೆ ಬಂದ ಗೌರವ ಡಾಕ್ಟರೇಟ್ ಪ್ರಶಸ್ತಿಯಿಂದ ಈ ಭಾಗದ ಮಹಿಳೆಯರಿಗೆ ಸಂತೋಷ ಮತ್ತು ಉತ್ಸಾಹ ಇಮ್ಮಡಿಗೊಳಿಸಿದೆ ಎಂದು ಭಾವಿಸಿದ್ದೇನೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಸದಾ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಡುತಾ ಬಂದಿದೆ. ಪೂಜ್ಯ ದೊಡ್ಡಪ್ಪ ಅಪ್ಪ ಅವರು ಪ್ರಪ್ರಥಮವಾಗಿ ಮಹಿಳೆಯರಿಗಾಗಿ ಶಾಲೆ ಆರಂಭಿಸಿದ ಇತಿಹಾಸ ಇದೆ. ಅದರಂತೆ ಪೂಜ್ಯ ಅಪ್ಪ ಅವರು ಮಹಿಳೆಯರಿಗಾಗಿಯೇ ಅನೇಕ ಶಾಲಾ-ಕಾಲೇಜು ಆರಂಭಿಸಿದ್ದಾರೆ. ತೊಟ್ಟಿಲು ತೂಗುವ ಕೈ ದೇಶ ಆಳುತ್ತದೆ ಎಂಬಂತೆ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ. ವಿದ್ಯಾರ್ಥಿನಿಯರು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಗುಲಬರ್ಗಾ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಡಾ.ಪರಿಮಳಾ ಅಂಬೇಕರ್ ಮಾತನಾಡಿ, ಶರಣಬಸವೇಶ್ವರ ಸಂಸ್ಥಾನ ಅನ್ನದಾಸೋಹದ ಜತೆಗೆ ಅಕ್ಷರದಾಸೋಹ ಮಾಡುತಾ ಬಂದಿದೆ. ಅವ್ವಾ ಅವರಿಗೆ ಸಂದ ಗೌರವ ಡಾಕ್ಟರೇಟ್ ಪ್ರಶಸ್ತಿಯಿಂದ ಶರಣ ಸಂಸ್ಥಾನಕ್ಕೆ ಕೀರಿಟ ಇಟ್ಟಂತಾಗಿದೆ. ಪೂಜ್ಯ ಅವ್ವಾ ಅವರು ಎಲ್ಲರನ್ನೂ ಆತ್ಮೀಯವಾಗಿ ಕಾಣುತ್ತಾರೆ. ಪೂಜ್ಯ ಡಾ.ಅಪ್ಪಾಜಿಯವರು ಮತ್ತು ಪೂಜ್ಯ ಡಾ.ಅವ್ವಾ ಅವರು ಶರಣಬಸವೇಶ್ವರ ಸಂಸ್ಥಾನವನ್ನು ಹೆಮ್ಮರವಾಗಿ ಬೆಳೆಸಿದ್ದಾರೆ ಎಂದು ಹೇಳಿದರು.
ಗೌರವ ಅತಿಥಿಗಳಾದ ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕರಾದ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಪೂಜ್ಯ ಡಾ.ದಾಕ್ಷಾಯಣಿ ಎಸ್.ಅಪ್ಪ ಅವರು ಈ ಭಾಗವನ್ನು ಧಾರ್ಮಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೆಳೆಸುತ್ತಿದ್ದಾರೆ. ಬಡವರ, ನಿರ್ಗತಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಕರೋನಾ ಸಮಯದಲ್ಲಿ ಅವ್ವ ಅವರು ನಿರಂತರ ದಾಸೋಹಗೈದಿದ್ದಾರೆ. ಇಂತಹ ಅನೇಕ ಕಾರ್ಯಗಳು ಮಾಡಿರುವುದರಿಂದ ಡಾಕ್ಟರೇಟ್ ಪ್ರಶಸ್ತಿ ನೀಡಿ ವಿಶ್ವವಿದ್ಯಾಲಯ ಗೌರವ ಹೆಚ್ಚಿಸಿಕೊಂಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಸ್ತ್ರೀ ಸಬಲೀಕರಣಕ್ಕೆ ಸಂಸ್ಥಾನ ಯಾವಾಗಲೂ ಒತ್ತು ಕೊಟ್ಟಿದೆ. ಸಂಸ್ಥೆಯಲ್ಲಿ ಮಹಿಳಾ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದೆ. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಮಹಿಳೆಯರು ಅನೇಕ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ವೇದಿಕೆ ಮೇಲೆ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸವತಿ ಖೂಬಾ, ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ, ಗೋದುತಾಯಿ ಬಿ.ಎಡ್. ಕಾಲೇಜಿನ ಪ್ರಾಚಾರ್ಯೆ ಡಾ. ಕಲ್ಪನಾ ಭೀಮಳ್ಳಿ ಇದ್ದರು.
ಕಲಾವಾಣಿ ವಿದ್ಯಾರ್ಥಿ ಸಂಘದ ಸಲಹೆಗಾರ ಡಾ.ಸೀಮಾ ಪಾಟೀಲ ಸ್ವಾಗತಿಸಿದರು, ಪ್ರಾಚಾರ್ಯೆ ಶ್ರೀಮತಿ ಜಾನಕಿ ಹೊಸೂರ ಪ್ರಾಸ್ತಾವಿಕ ಮಾತನಾಡಿದರು. ಶ್ರೀಮತಿ ಶಕುಂತಲಾ ಖಜೂರಿ ವಂದಿಸಿದರು. ಸಂಗೀತ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕರು, ಬೇರೆ ಬೇರೆ ಕಾಲೇಜಿನ ಪ್ರಾಚಾರ್ಯರು, ಶಿಕ್ಷಕರು ಮತ್ತು ಶಿಕ್ಷಕೇತರರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.