ವೈಜ್ಞಾನಿಕ ನೆಲೆಯ ಜಾನಪದ ಚಿಂತಕ ಡಾ.ಹಿ.ಶಿ.ರಾ
ಕಲಬುರಗಿ:ಮಾ.14: ಜಾನಪದವನ್ನು ವೈಜ್ಞಾನಿಕ ನೆಲೆಯಲ್ಲಿ ಚಿಂತನೆ ನಡೆಸಿದ ಮೊದಲಿಗರು ಎಂದರೆ ಡಾ.ಹಿ.ಶಿ.ರಾಮಚಂದ್ರೇಗೌಡರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ಹಾಗೂ ಶ್ರೀಮತಿ ಪಿಲ್ಲೂ ಹೋಮಿ ಇರಾಣಿ ಮಹಿಳಾ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಗುರುವಾರ ನಡೆದ ಜಾನಪದ ಸರಣಿ ಕಾರ್ಯಕ್ರಮದಲ್ಲಿ ಜಾನಪದ ತಜ್ಞರಾದ ಡಾ.ಹಿ.ಶಿ.ರಾ. ಅವರ ಬದುಕು – ಬರಹ ಕುರಿತು ಉಪನ್ಯಾಸ ನೀಡಿದ ಅವರು, ದೇಶಿ-ವಿದೇಶಿ ಚಿಂತನೆಯನ್ನು ಸ್ಥಳೀಯ ವಿದ್ಯಮಾನಗಳ ಜೊತೆಗೆ ಲೇಪಿಸಿ ಜಾನಪದವನ್ನು ವ್ಯಾಖ್ಯಾನಿಸುವ ಜ್ಞಾನಿಯಾಗಿದ್ದಾರೆ ಎಂದು ಹೇಳಿದರು.
ಹೊಸತನ್ನು ಅರಿಯುವ ಹಿನ್ನೆಲೆಯಲ್ಲಿ ನಮ್ಮ ಕಾಲಘಟ್ಟದ ಸಂವೇದನೆಗಳ ಜೀವಪರ ಪ್ರತಿಪಾದಕರಾಗಿದ್ದು, ಜಾನಪದ ಉಳಿಸುವ ನಿಟ್ಟಿನಲ್ಲಿ 25 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದು ಸಾಧನೆಗೆ ಹಿಡಿದ ಕನ್ನಡಿ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಪ್ರಾಧ್ಯಾಪಕಿ ಡಾ.ಸುಜಾತಾ ಜಂಗಮಶೆಟ್ಟಿ ಮಹಿಳಾ ದಿನದ ಹಿನ್ನೆಲೆಯಲ್ಲಿ ಮಾತನಾಡಿದರು.
ಮಹಿಳೆಯರು ಪುರುಷರಷ್ಟೇ ಸಮಾನಳು. ಯಾವುದಕ್ಕೂ ಹೆದರಬೇಕಿಲ್ಲ. ಸಮ ಸಮಾಜ ನಿರ್ಮಾಣಕ್ಕೆ ಶರಣರು ಕಲ್ಪಿಸಿಕೊಟ್ಟಿದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ.