ಮಾ.17ರಂದು 121 ಕೃತಿಗಳ ಲೋಕಾರ್ಪಣೆ: ಕೊನೇಕ
ಕಲಬುರಗಿ,ಮಾ.14: ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೆÇೀ ಮತ್ತು ಪ್ರಕಾಶನ, ಬಸವ ಪ್ರಕಾಶನ ಹಾಗೂ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಈ ಸಹೋದರ ಸಂಸ್ಥೆಗಳಿಂದ ಪ್ರಕಟಿತ 121 ಕೃತಿಗಳ ಲೋಕಾರ್ಪಣೆ ಸಮಾರಂಭ ಇದೇ ಮಾರ್ಚ್ 17ರಂದು ಸಂಜೆ 5.30ಕ್ಕೆ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಏರ್ಪಡಿಸಲಾಗುತ್ತಿದೆ ಎಂದು ಸಿದ್ಧಲಿಂಗೇಶ್ವರ ಪ್ರಕಾಶನದ ಬಸವರಾಜ ಕೊನೇಕ ತಿಳಿಸಿದರು.
ಇಲ್ಲಿನ ಸಿದ್ಧಲಿಂಗೇಶ್ವರ ಬುಕ್ ಡಿಪೆÇೀ ಮಳಿಗೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೈಸೂರಿನ ಸುತ್ತೂರು ವೀರ ಸಿಂಹಾಸನ ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಗ್ರಂಥಗಳ ಲೋಕಾರ್ಪಣೆ ನೆರವೇರಿಸಲಿದ್ದಾರೆ ಎಂದರು.ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್.ಅಪ್ಪ ಅವರು ನೇತೃತ್ವ ವಹಿಸುವರು. ಈ ಕೃತಿಗಳ ಕುರಿತು ಖ್ಯಾತ ಸಾಹಿತಿ ಬಾಳಾಸಾಹೆಬ ಲೋಕಾಪುರ ಮಾತನಾಡಲಿದ್ದಾರೆ. ಮಾಜಿ ಲೋಕಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ
ಡಾ. ಬಿ. ಕೆ. ತುಳಸಿಮಾಲಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ದಯಾನಂದ ಅಗಸರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಪ್ರಕಾಶಕ ಬಸವರಾಜ ಕೊನೇಕ ಮತ್ತು ಸಲಹಾ ಸಮಿತಿ ಹಿರಿಯ ಸದಸ್ಯ ಡಾ.ಗವಿಸಿದ್ದಪ್ಪ ಪಾಟೀಲ್ ಉಪಸ್ಥಿತರಿರುವರು ಎಂದು ವಿವರಿಸಿದರು.ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಇದೇ ವೇಳೆ, ಕಲ್ಯಾಣ ಕರ್ನಾಟಕ ಸಾಹಿತ್ಯ ವಾಚಿಕೆ ಮಾಲಿಕೆ, ಸಾಹಿತ್ಯ ಮಾಲಿಕೆ, ಜನಪ್ರಿಯ ಮಾಲಿಕೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ.) ಪುಸ್ತಕಗಳು ಬಿಡುಗಡೆಗೊಳ್ಳುತ್ತವೆ. ಈ ವರ್ಷ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮ ವರ್ಷದಲ್ಲಿ ನಾವಿರುವುದರಿಂದ ಈ ಸವಿನೆನಪಿಗಾಗಿ ವಿಶೇಷವಾಗಿ 23 ಸಂಪುಟಗಳ ವಾಚಿಕೆಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಡಾ.ವಿನೋದಕುಮಾರಗೆ ಸನ್ಮಾನ
ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಿದ ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಡಾ.ವಿನೋದಕುಮಾರ ಅವರನ್ನು ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಮತ್ತು ನಮ್ಮ ಪ್ರಕಾಶನದ ಪುಸ್ತಕಗಳ ಖರೀದಿಯಲ್ಲಿ ಇತರರಿಗೆ ನೀಡುವ ರಿಯಾಯಿತಿಯಲ್ಲಿ ಶೇ.5ರಷ್ಟು ಹೆಚ್ಚಿನ ರಿಯಾಯಿತಿಯನ್ನು ಯೋಧರ ಮಕ್ಕಳಿಗೆ ನೀಡಲಾಗುವುದು ಎಂದು ಬಸವರಾಜ ಕೊನೇಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿದ್ಧಲಿಂಗೇಶ್ವರ ಪ್ರಕಾಶನದ ಸಿದ್ಧಲಿಂಗ ಬಿ.ಕೊನೇಕ, ಬಸವ ಪ್ರಕಾಶನದ ಶರಣು ಬಿ.ಕೊನೇಕ, ಸಲಹಾ ಸಮಿತಿ ಸದಸ್ಯರಾದ ಡಾ.ಸ್ವಾಮಿರಾವ ಕುಲಕರ್ಣಿ, ಪ್ರೊ.ಶಿವರಾಜ ಪಾಟೀಲ, ಡಾ.ಗವಿಸಿದ್ದಪ್ಪ ಪಾಟೀಲ, ಡಾ.ಚಿ.ಸಿ.ನಿಂಗಣ್ಣ, ಡಾ.ಶರಣಬಸಪ್ಪ ವಡ್ಡನಕೇರಿ ಸೇರಿದಂತೆ ಇತರರಿದ್ದರು.