ಭೌತವಿಜ್ಞಾನದಲ್ಲಿ ಕ್ರಾಂತಿ ಮೂಡಿಸಿದ ಐನಸ್ಟೀನ್
ಕಲಬುರಗಿ:ಮಾ.14: ಯಾವುದೇ ಒಂದು ರಾಷ್ಟ್ರದ ಅಭಿವೃದ್ಧಿಯು ಅಲ್ಲಿನ ವಿಜ್ಞಾನ ಕ್ಷೇತ್ರದ ಬೆಳವಣಿಗೆಯ ಮೇಲೆ ಅವಲಂಬಿಸಿದೆ. ಅನೇಕ ವಿಜ್ಞಾನಿಗಳು ತಮ್ಮ ಜೀವವನ್ನು ಸವೆಸಿ ವಿಜ್ಞಾನ ಕ್ಷೇತ್ರವನ್ನು ಬೆಳೆಸಿದ್ದಾರೆ. ವಿಶ್ವ ಪ್ರಸಿದ್ದ ಭೌತವಿಜ್ಞಾನಿ ಅಲ್ಬರ್ಟ್ ಐನಸ್ಟೀನ್ ಅವರು ಇ=ಎಂಸಿ(2) ಎಂಬ ‘ಸಾಪೇಕ್ಷತಾ ಸಿದ್ಧಾಂತ’ದ ಮೂಲಕ ಭೌತವಿಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯ ‘ಮುತ್ತಾ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಜಗದ್ವಿಖ್ಯಾತ ಭೌತವಿಜ್ಞಾನಿ ಅಲ್ಬರ್ಟ್ ಐನಸ್ಟೀನ್ ಜನ್ಮದಿನಾಚರಣೆ’ಯಲ್ಲಿಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಮುಖ್ಯಸ್ಥ ಶಿವಕುಮಾರ ಮುತ್ತಾ ಮಾತನಾಡಿ, ಐನಸ್ಟೀನ್ ಅವರು 1879ರಲ್ಲಿ ಜರ್ಮನಿಯ ಅಲ್ಮ್ ಎಂಬಲ್ಲಿ ಜನಿಸಿದರು. ಕ್ವಾಂಟ್‍ಂ ಮೆಕಾನಿಕ್ಸ್ ಕ್ಷೇತ್ರದಲ್ಲಿಯೂ ಕೂಡಾ ಗಣನೀಯ ಸೇವೆ ಸಲ್ಲಿಸಿದ್ದಾರೆ. 1921ರಲ್ಲಿ ಅವರಿಗೆ ನೋಬೆಲ್ ಪ್ರಶಸ್ತಿ ದೊರೆತಿದೆ. ಇಂಥ ಮೇರು ವಿಜ್ಞಾನಿಗಳ ಬಗ್ಗೆ ಅಧ್ಯಯನ ಮಾಡಿ, ಅವರಂತೆ ಸಂಶೋಧನೆ ಮಾಡುವ ಮೂಲಕ ವಿಜ್ಞಾನಿಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್.ಬಿರಾದಾರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ನಿವೃತ್ತ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ ಸೇರಿದಂತೆ ಮತ್ತಿತರರಿದ್ದರು.