20ರಂದು ಸೀಳು ವಿರೂಪ ರೋಗಿಗಳ ಶಸ್ತ್ರ ಚಿಕಿತ್ಸೆ: ಡಾ.ರೇಜಂತಲ್
ಬೀದರ್:ಮಾ.14: ಕೋಲ್‍ಗೇಟ್ ಪಾಮೋಲಿವ್ ಇಂಡಿಯಾ ಲಿಮಿಟೆಡ್‍ನ: ಸಿ.ಎಸ್.ಆರ್.ಉಪಕ್ರಮದ ಅಡಿಯಲ್ಲಿ ಸೀಳು ತುಟಿಗಳು ಹಾಗೂ ಸೀಳು ಅಂಗುಳ ಹೊಂದಿರುವ ವಿರೂಪ ರೋಗಿಗಳ ಉಚಿತ ಶಸ್ತ್ರ ಚಿಕಿತ್ಸಾ ಕಾರ್ಯವನ್ನು ಮಿಷನ್ ಸ್ಮೈಲ್ ಮತ್ತು ವಾಸು ಆಸ್ಪತ್ರೆ ಸಹಯೋಗದಲ್ಲಿ ನಗರದ ಮೈಲೂರು ಕ್ರಾಸ್ ಹತ್ತಿರ ಇರುವ ವಾಸು ಆಸ್ಪತ್ರೆಯಲ್ಲಿ ಮಾರ್ಚ್ 20 ರಿಂದ 23ರ ವರೆಗೆ ಆಯೋಜನೆ ಮಾಡಲಾಗಿದೆ. ಬೀದರ ಜಿಲ್ಲೆಯ ಸೀಳು ತುಟಿಗಳನ್ನು ಹೊಂದಿರುವ ಮಕ್ಕಳು, ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಾಸು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಸಂತೋಷ ರೇಜಂತಲ್ ತಿಳಿಸಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಸ್ವ. ಸಂಗಯ್ಯ ರೇಜಂತಲ್ ಅವರ ಆಶಿರ್ವಾದದಿಂದ ಈ ಶಸ್ತ್ರ ಚಿಕಿತ್ಸೆಗಾಗಿ ಆಗಮಿಸುವ ರೋಗಿಗಳಿಗೆ ಪ್ರವಾಸ ಭತ್ಯೆ, ವೈದ್ಯಕೀಯ ತಪಾಸಣೆ, ಆಸ್ಪತ್ರೆ ಪ್ರವೇಶ, ಶಸ್ತ್ರ ಚಿಕಿತ್ಸೆ ವೆಚ್ಚಗಳು, ಔಷಧಿಗಳು ಮತ್ತು ಊಟದ ವ್ಯವಸ್ಥೆ ಉಚಿತವಾಗಿ ನೀಡಲಾಗುತ್ತಿದೆ. ನಮ್ಮಲ್ಲಿ 100 ಹಾಸಿಗೆಗಳ ಬೆಡ್ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯಗಳಿರುವ ಕಾರಣ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ರೋಟ್ರಿ ಕ್ಲಬ್ ಆಫ್ ಬೀದರ್ ನ್ಯು ಸೆಂಚೂರಿ ಅಧ್ಯಕ್ಷ ಡಾ. ಕಪಿಲ್ ಪಾಟೀಲ ಮಾತನಾಡಿ, ಪ್ರತಿವರ್ಷ 35 ಸಾವಿರ ಸೀಳು ತುಟಿ ಮಕ್ಕಳು ಜನನ ಹೊಂದುತ್ತಿದ್ದಾರೆ. ಮಕ್ಕಳು ಸೀಳು ತುಟಿಯಿಂದ ಜನಿಸಲು ಅಂತಹ ಪ್ರಮುಖ ಕಾರಣಗಳೇನು ಇಲ್ಲ. ವಂಶ ಪಾರಂಪರ್ಯವಾಗಿ ಜನಿಸುತ್ತಾರೆ. ಇಲ್ಲ ಜೀವಸತ್ವದ ಕೊರತೆಯಿಂದ ಹುಟ್ಟುತ್ತಾರೆ. ಇಂತಹ ಮಕ್ಕಳು ಬಹುತೇಕ ಬಡವರ ಮನೆಯಲ್ಲಿ ಜನಿಸುತ್ತಾರೆ. ರೋಗಿಗಳು ಅಥವಾ ಪಾಲಕರು ಗಾಬರಿಪಡುವ ಅವಶ್ಯಕತೆಯಿಲ್ಲ. ಮಾರ್ಚ್ 20 ರಿಂದ 23ರ ವರೆಗೆ ನಗರದ ವಾಸು ಆಸ್ಪತ್ರೆಯಲ್ಲಿ ಈ ಸೀಳು ತುಟಿಯ ಶಸ್ತ್ರಚಿಕಿತ್ಸೆ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ಕಾಗಿ 4 ಜನ ಅನೆಸ್ತೆಶಿಯಾ ವೈದ್ಯರು ಹಾಗೂ 4 ಜನ ತಜ್ಞವೈದ್ಯರು ಆಗಮಿಸಿ ಚಿಕಿತ್ಸೆ ನೀಡಲಿದ್ದಾರೆ ಎಂದು ತಿಳಿಸಿದರು.
ಕೋಲ್ಗೇಟ್ ಪಾಮೋಲಿವ್ ಇಂಡಿಯಾ ಲಿಮಿಟೆಡ್‍ನ ಮೀಷನ್ ಸ್ಮೈಲ್ ಸಂಯೋಜಕ ಆಶಿಸ್ ಬ್ಯಾನರ್ಜಿ ಮಾತನಾಡಿ, ನಮ್ಮ ಸಂಸ್ಥೆ 2002 ರಿಂದ ಕೆಲಸ ಮಾಡುತ್ತಿದೆ. ಇದುವರೆಗೆ ಸೀಳು ತುಟಿ ಹೊಂದಿರುವ ಸುಮಾರು 46, 100 ಮಕ್ಕಳ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದೀಗ ಪ್ರ ಪ್ರಥಮವಾಗಿ ಬೀದರನ ವಾಸು ಆಸ್ಪತ್ರೆಯಲ್ಲಿ ಈ ಕಾರ್ಯ ಹಮ್ಮಿಕೊಂಡಿದ್ದು, ಸುಮಾರು 50 ಜನರ ಶಸ್ತ್ರಚಿಕಿತ್ಸೆ ಮಾಡುವ ಗುರಿ ಹೊಂದಲಾಗಿದೆ. ಜಿಲ್ಲೆಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ವಾಸು ಆಸ್ಪತ್ರೆಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ನೀತಾ ರೇಜಂತಲ್, ಶಿವಕುಮಾರ ಪಾಖಲ್, ಸೂರ್ಯಕಾಂತ ರಾಮಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದೇ ವೇಳೆ ಶಸ್ತ್ರ ಚಿಕಿತ್ಸೆಯ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.