ವಿಕಲಚೇತನರಿಗೆ ವಿಶೇಷ ರೈಲುಗಳಲ್ಲಿ ಮೀಸಲಾತಿ: ಬಸವರಾಜ ಹೆಳವರ ಹರ್ಷ
ಕಲಬುರಗಿ:ಮಾ.14: ಭಾರತೀಯ ರೈಲ್ವೇ ತನ್ನ ಸೇವೆಗಳನ್ನು ಹೆಚ್ಚು ಅನುಕೂಲಕರವಾಗಿಸಲು ಮತ್ತು ವಿಕಲಚೇತನ ಪ್ರಯಾಣಿಕರಿಗೆ ಪ್ರಯಾಣಿಸಲು ವಿವಿಧ ಸೌಲಭ್ಯಗಳನ್ನು ನೀಡಿದೆ. ಇತ್ತಿಚೆಗೆ ವಿಕಲಚೇತನರಿಗೆ ಅನುಕೂಲಕರವಾಗಿಸಲು ರಾಜಧಾನಿ, ಡುರಂಟೊ, ವಂದೇ ಭಾರತ, ಹಮ್ಸಪರ್ ಹಾಗೂ ಗತಿಮಾನ್ ವಿಶೇಷ ರೈಲುಗಳು ಸೇರಿದಂತೆ ಎಲ್ಲಾ ಕಾಯ್ದಿರಿಸಿದ ಮೇಲ್/ಎಕ್ಸಪ್ರೆಸ್ ರೈಲುಗಳಲ್ಲಿ ದಿವ್ಯಾಂಗ ಪ್ರಯಾಣಿಕರಿಗೆ ರಿಯಾಯಿತಿ ದರದಲ್ಲಿ ಕಾಯ್ದಿರಿಸುವ ಆಸನಗಳಿಗೆ ಮೀಸಲಾತಿ ಕೋಟಾ ನೀಡಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ಈ ಮೊದಲು ವಿಕಲಚೇತನರು ವಂದೇ ಭಾರತ ಹಾಗೂ ಇನ್ನಿತರ ವಿಶೇಷ ರೈಲುಗಳಲ್ಲಿ ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಮೀಸಲಾತಿ ಇರುತ್ತಿರಲಿಲ್ಲ. ಈಗ ನೈಋತ್ಯ ರೈಲ್ವೆ ಅನುಕೂಲ ಮಾಡಿಕೊಟ್ಟಿದೆ. ರೈಲ್ವೆ ಇಲಾಖೆ ದಿವ್ಯಾಂಗ ಸ್ನೇಹಿಯಾಗಿರುವುದು ಹರ್ಷದಾಯಕವಾಗಿದೆ ಎಂದು ಸಕ್ಷಮ ಕಲಬುರಗಿ ಜಿಲ್ಲಾ ಶಾಖೆಯ ಅಧ್ಯಕ್ಷ ಬಸವರಾಜ ಹೆಳವರ ಯಾಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.