ಶರಣ ತತ್ವಕ್ಕೆ ಪೂಜ್ಯ ಡಾ.ಮಾತೆ ಮಹಾದೇವಿಯವರ ಕೊಡುಗೆ ಅನನ್ಯ
ಕಲಬುರಗಿ:ಮಾ.14: ಸಾಮಾಜಿಕ ನ್ಯಾಯದ ಹರಿಕಾರರಾದ ಬಸವಣ್ಣನವರು ಮತ್ತು ಎಲ್ಲಾ ಶರಣರ ತತ್ವ ಹಾಗೂ ಕೊಡುಗೆಯನ್ನು ದೇಶದುದ್ದಕ್ಕೂ ಪ್ರಚಾರ ಮಾಡಿ, ಎಲ್ಲರಿಗೂ ವಚನಗಳ ಸಾರವನ್ನು ಉಣಬಡಿಸುವ ಮೂಲಕ ಮಾತೆ ಮಹಾದೇವಿಯವರು ಶರಣ ತತ್ವದ ಪ್ರಸಾರಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಶಹಾಬಜಾರ ನಾಕಾ ಸಮೀಪವಿರುವ ‘ಕರೋಕೆ ಸಂಗೀತ ಕೋಚಿಂಗ್ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಸಂಜೆ ಜರುಗಿದ ಮಾತೆ ಮಹಾದೇವಿ ಅವರ 78ನೇ ಜನ್ಮದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ದೇಶದ ಮೊದಲ ಮಹಿಳಾ ಜಗದ್ಗುರುಗಳಾಗಿ ಮಹಿಳೆಯರಲ್ಲಿವ ಮೌಢ್ಯತೆ, ಕಂದಾಚಾರವನ್ನು ಹೋಗಲಾಡಿಸುವಲ್ಲಿ ಶ್ರಮಿಸಿದ್ದಾರೆ. ಎಲ್ಲೆಡೆ ಸಂಚರಿಸಿ ತಮ್ಮ ಪ್ರವಚನದ ಮೂಲಕ ಜನಜಾಗೃತಿಯನ್ನು ಮೂಡಿಸಿದ್ದಾರೆ. ಬಸವ ತತ್ವವನ್ನು ಗ್ರಾಮೀಣ ಪ್ರದೇಶ ಒಳಗೊಂಡಂತೆ ಪ್ರತಿಯೊಬ್ಬರ ಮನೆ-ಮನಗಳನ್ನು ಮುಟ್ಟಿಸುವಲ್ಲಿ ಮಾತಾಜೀಯವರು ಇಡೀ ತಮ್ಮ ಜೀವನವನ್ನು ಮುಡಪಾಗಿಟ್ಟವರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ಪ್ರಕಾಶ ಸರಸಂಬಿ, ಅಂಬಾರಾಯ ಕಡಗಂಚಿ, ಜಗು ಹುನ್ನಳ್ಳಿ, ಪ್ರತೀಕ್, ಶಾಮರಾವ ಜೀವಣಗಿ, ಅಭಿಶೇಕ್ ಸೋನಾಯಿ ಸೇರಿದಂತೆ ಮತ್ತಿತರರಿದ್ದರು.