“ಹಾವಿನಹಾಳು ರಸ್ತೆಗೆ ತಾತ್ಕಾಲಿಕ ಮೊರಂ ಲೇಪನ”
ಸಂಜೆವಾಣಿ ವಾರ್ತೆ
ಸಿರಿಗೇರಿ.ಮಾ.14. ಸಮೀಪದ ಹಾವಿನಹಾಳು ಮುದ್ದಟನೂರು, ವೀರಾಪುರ, ಚನ್ನಪಟ್ಟಣ ಮಾರ್ಗದ ರಸ್ತೆಗೆ ತಾತ್ಕಾಲಿಕವಾಗಿ ಮೊರಂ (ಕೆಂಪು ಗರಚು) ಮಣಿನಿಂದ ಲೇಪನ ಹಾಕಿರುವುದು ಈ ಮಾರ್ಗದ ವಾಹನ ಸವಾರರಿಗೆ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಮುದ್ದಟನೂರು ಹಾವಿನಹಾಳು ಚನ್ನಪಟ್ಟಣ ಮಾರ್ಗದ ರಸ್ತೆಯು ಡಾಂಬರ್ ಕಿತ್ತುಕೊಂಡು ಅಡಿಗಾತ್ರದ ಕುಣಿಗಳು ಉಂಟಾಗಿ ನಿತ್ಯವೂ  ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಸರ್ಕಸ್‍ಮಯವಾಗಿತ್ತು. ಈ ಸಮಸ್ಯೆ ಕುರಿತು ಸಂಜೆವಾಣಿ ಪತ್ರಿಕೆಯಲ್ಲಿ ವರಧಿಯನ್ನೂ ಮಾಡಲಾಗಿತ್ತು. ತತ್ಸಂಬಂದವಾಗಿ ಈಗ ಈ ರಸ್ತೆಯಲ್ಲಿ ಮೊರಂ ಹಾಕಿ ತಗ್ಗುಗಳನ್ನು ಮುಚ್ಚುವ ಕೆಲಸವಾಗಿದೆ. ಈ ಮಾರ್ಗದಲ್ಲಿ ತಮ್ಮ ಜಮೀನುಗಳಿಗೆ ಪಕ್ಕದ ಗ್ರಾಮಗಳಿಗೆ ಹೋಗುವ ಪ್ರಯಾಣಿಕರಿಗೆ ಕೊಂಚ ತ್ರಾಸು ಕಡಿಮೆಯಾಗಿದೆ. ಮುಂದೆ ಮಳೆಗಾಲ ಪ್ರಾರಂಭವಾಗಲಿದ್ದು ಈ ಮಾರ್ಗದಲ್ಲಿ ಡಾಂಬರ್ ರಸ್ತೆ ಹಾಕಿಸುವ ಕೆಲಸ ಸಂಬಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.