“ನರೇಗಾ ಕೂಲಿಕಾರ್ಮಿಕರಿಗೆ ನೀರು ನೆರಳು ಒದಗಿಸುವಂತೆ ಮೇಟಿಗಳಿಂದ ಆಗ್ರಹ”
ಸಂಜೆವಾಣಿ ವಾರ್ತೆ
ಸಿರಿಗೇರಿ.ಮಾ.14. ಗ್ರಾಮೀಣ ಭಾಗದಲ್ಲಿ ಈಗಾಗಲೇ ಪ್ರಾರಂಭಗೊಂಡಿರುವ ಗ್ರಾಮ ಪಂಚಾಯಿತಿಯಿಂದ ಅನುಷ್ಠಾನಗೊಂಡ ನರೇಗಾ ಕಾಮಗಾರಿ ನಡೆಯುವ ಸ್ಥಳದಲ್ಲಿ ಕುಡಿವ ನೀರಿನ ವ್ಯವಸ್ಥೆ ಮತ್ತು ವಿಶ್ರಾಂತಿ ಸಮಯದಲ್ಲಿ ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಒಂದು ಶಾಮಿಯಾನ ನೆರಳಿನ ವ್ಯವಸ್ಥೆ ಮಾಡಿಕೊಡಬೇಕೆಂದು, ಮತ್ತು ಕೆಲಸದಲ್ಲಿ ಈಗ ನೀಡುತ್ತಿರುವ ನಿಗದಿತ ಅಳೆಯಲ್ಲಿ ಕಡಿಮೆ ಮಾಡಿಕೊಡಬೇಕೆಂದು ಕೂಲಿಕಾರ್ಮಿಕರ ಪರವಾಗಿ ಮೇಠಿಗಳು ಗ್ರಾಮ ಪಂಚಾಯಿತಿ ಮತ್ತು ನರೇಗಾ ಅನುಷ್ಠಾನ ಅಧಿಕಾರಿಗಳಲ್ಲಿ ಆಗಹಿಸಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಸಿರಿಗೇರಿ ಸಮೀಪದ ಗುಂಡಿಗನೂರು ಕೆರೆಯಲ್ಲಿ ಹೂಳೆತ್ತುವ ಕೆಲಸ ನಿರ್ವಹಿಸುತ್ತಿದ್ದ ಸ್ಥಳಕ್ಕೆ ತಾ.ಪಂ. ನರೇಗಾ ಯೋಜನೆಯ ಸಹಾಯಕ ನಿರ್ಧೇಶಕರಾದ ಮನೋಹರ್ ಇವರು ಗ್ರಾಮ ಪಂಚಾಯಿತಿ ಪಿಡಿಓ ಯು.ರಾಮಪ್ಪ ಇವರೊಂದಿಗೆ ಭೇಟಿನೀಡಿ ಪರಿಶೀಲಿಸಿದರು.
     ಅಧಿಕಾರಿಗಳ ಮುಂದೆ ಕೂಲಿಕಾರ್ಮಿಕರು, ಮೇಠಿಗಳು ತಮ್ಮ ಸಮಸ್ಯೆಗಳನ್ನು ಹೇಳಿದಾಗ ಪ್ರತಿಕ್ರಯಿಸಿದ ಅಧಿಕಾರಿಗಳು ಪಿಡಿಓ ರವರಿಗೆ ನೆರಳಿಗಾಗಿ ಶಾಮಿಯಾನ ಮತ್ತು ಕುಡಿವ ನೀರಿನ ವ್ಯವಸ್ಥೆ ಮಾಡುವಂತೆ ತಿಳಿಸಿದರು. ಕೂಲಿಕಾರ್ಮಿಕರ ಬೇಡಿಕೆಯಾದ ಕೆಲಸದ ನಿಗದಿತ ಆಳ, ಅಗಲ, ಉದ್ದಗಳನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಲು ಸಾಧ್ಯವಿಲ್ಲ. ಕೂಲಿ ಹಣಕ್ಕೆ ತಕ್ಕಷ್ಟು ಕೆಲಸವನ್ನು ನಿಗದಿಪಡಿಸಲಾಗಿರುತ್ತದೆ. ನೀವು ಬೇಕಾದರೆ ಬೆಳಿಗ್ಗೆ ಇನ್ನೂ ಬೇಗನೆ ಬಂದು ಕೆಲಸ ಶುರು ಮಾಡಿಕೊಳ್ಳಬೇಕೆಂದು ಮೇಟಿಗಳಿಗೆ ಕೂಲಿಕಾರ್ಮಿಕರಿಗೆ ತಿಳಿಸಿದರು. ಪಿಡಿಓ ಯು.ರಾಮಪ್ಪ ಮಾತನಾಡಿ ನೀರು ನೆರಳಿನ ವ್ಯವಸ್ಥೆ ಮಾಡಲಾಗುವುದು, ನಾಳೆಯಿಂದ ಬೇಗನೇ ಬಂದು ನಿಗದಿತ ಅಳತೆಯಲ್ಲಿ ಕೆಲಸ ನಿರ್ವಹಿಸಬೇಕೆಂದು, ತಾಂತ್ರಿಕ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಕೂಲಿ ನಿರ್ವಹಣೆ ಮಾಡಲಾಗುವುದೆಂದು ತಿಳಿಸಿದರು. ತಾಂತ್ರಿಕ ಸಂಯೋಜಕ ಪ್ರದೀಪ್, ನರೇಗಾ ಸಿಬ್ಬಂದಿಗಳು, ಕಂ.ಆಪರೇಟರ್ ಫಯಾಜ್, ಜಲಾಲಿ, ಸುಮಂಗಳಮ್ಮ, ಮೇಠಿಗಳಾದ ಪ್ರಕಾಶ್, ಹಳ್ಳಿಮರದ ಹನುಮಂತ, ಶಾಂತಮೂರ್ತಿ, ಹಳ್ಳೀಮರದ ನಾಗರಾಜ, ಅಯ್ಯಪ್ಪ, ಕೂಲಿಕಾರ್ಮಿಕರು ಇತರರು ಇದ್ದರು.