ಕೂಡ್ಲಿಗಿಯಲ್ಲಿ ಅರೆಸೇನಾಪಡೆ ಹಾಗೂ ಪೊಲೀಸರಿಂದ ಪಥಸಂಚಲನ, ಜಾಗೃತಿ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ.14 :- ಮುಂಬರುವ ಲೋಕಸಭಾ ಚುನಾವಣೆ ನಿಮಿತ್ತ ಮತದಾರರಲ್ಲಿ ಯಾವುದೇ ಭಯಬೇಡ ನಿಮ್ಮ ಜೊತೆ ನಾವಿದ್ದೇವೆ ಮುಕ್ತವಾಗಿ ಪ್ರಜಾಪ್ರಭುತ್ವದ ತಮ್ಮ ಹಕ್ಕನ್ನು ನಿರ್ಭತಿಯಿಂದ ಚಲಾಯಿಸಿ ಎನ್ನುವ ಮುಂಜಾಗ್ರತೆಗಾಗಿ ಕೂಡ್ಲಿಗಿಯಲ್ಲಿ ಇಂದು ಬೆಳಿಗ್ಗೆ ನೂರಕ್ಕೂ ಹೆಚ್ಚು ಅರೆಸೇನಾ ಪಡೆ ಜೊತೆ ಪೊಲೀಸ್ ಸಿಬ್ಬಂದಿಗಳು  ಕೂಡ್ಲಿಗಿ ಡಿವೈಎಸ್ ಪಿ, ಸಿಪಿಐ ಹಾಗೂ ಪಿಎಸ್ಐ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಈ ಪಥಸಂಚಲನಕ್ಕೆ ಕೂಡ್ಲಿಗಿ ಡಿವೈಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ ಚಾಲನೆ ನೀಡಿ ಮಾತನಾಡುತ್ತ ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು ಮುಂಬರುವ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕು ಮುಕ್ತವಾಗಿ  ನಿರ್ಭತಿಯಿಂದ ಚಲಾಯಿಸಲು ಮುಂದಾಗಿ ಎಂದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಇದಾಗಿದೆ ಎಂದು ತಿಳಿಸಿದರು.
ಕೂಡ್ಲಿಗಿ ಸಿಪಿಐ ಸುರೇಶ ತಳವಾರ ಮಾತನಾಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಮತದಾನದಿಂದ ವಂಚಿತರಾಗದಿರಿ ಪ್ರಜಾಪ್ರಭುತ್ವದ ಹಕ್ಕನ್ನು ತಪ್ಪದೆ ಚಲಾಯಿಸಿ ಯಾವುದೇ ಅಹಿತಕರ ಘಟನೆ ಜರುಗದಂತೆ ಮತದಾರರ ಬೆನ್ನೆಲುಬಾಗಿ ನಾವಿದ್ದೇವೆ ನಿಮ್ಮ ರಕ್ಷಣೆ ನಮ್ಮ ಹೊಣೆ ಎನ್ನುವ ನಿಟ್ಟಿನಲ್ಲಿ ಅರೆಸೇನಾ ಪಡೆಯೊಂದಿಗೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಬ್ಬಂದಿಗಳು ಪಥಸಂಚಲನ ನಡೆಸಿ ಮತದಾರರಿಗೆ ಆತ್ಮ ಸ್ಥೈರ್ಯ ತುಂಬುವ ಜಾಗೃತಿ ಜಾಥಾ ಇದಾಗಿದೆ ಎಂದರು.
ಕೂಡ್ಲಿಗಿ ಪಿಎಸ್ಐ ಧನುಂಜಯ ಹಾಗೂ ಸಿಬ್ಬಂದಿಗಳು ಸೇರಿ ನೂರಾರು ಅರೆಸೇನಾ ಪಡೆ ಕೂಡ್ಲಿಗಿ ಪಟ್ಟಣದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತ, ಪಾದಾಗಟ್ಟೆ ವೃತ್ತ, ಮದಕರಿ ವೃತ್ತ, ಕೊಟ್ಟೂರು ರಸ್ತೆ ಮೂಲಕ ರಾಮನಗರ, ಅಂಬೇಡ್ಕರ್ ನಗರ, ಪೇಟೆ ಬಸವೇಶ್ವರ, ರಾಮಲಿಂಗೇಶ್ವರ ದೇವಸ್ಥಾನ ರಸ್ತೆ ಮೂಲಕ ಕೊರಖಣ ಓಣಿ ಮೂಲಕ ಕೂಡ್ಲಿಗಿ ಪೊಲೀಸ್ ಠಾಣೆವರೆಗೆ ಪಥಸಂಚಲನ ನಡೆಸಲಾಯಿತು ಈ ಸಂದರ್ಭದಲ್ಲಿ ಕೂಡ್ಲಿಗಿ ಮದಕರಿ ವೃತ್ತದಲ್ಲಿ ಕೂಡ್ಲಿಗಿ ಪ ಪಂ ಸದಸ್ಯ ಕಾವಲ್ಲಿ ಶಿವಪ್ಪ ನಾಯಕ ಹಾಗೂ ಇತರರು ಅರೆಸೇನಾ ಪಡೆಯ ಹಿರಿಯ ಅಧಿಕಾರಿಗಳನ್ನು ಹೂವಿನ ಹಾರ ಹಾಕಿ ಜನತೆ ಪರವಾಗಿ  ಸ್ವಾಗತ ಕೋರಿದರು .
ನಂತರ ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡೆಬಸಾಪುರ ತಾಂಡಾ ಹಾಗೂ ಬಡೇಲಡಕು ಗ್ರಾಮದಲ್ಲಿ ಪಥಸಂಚಲನ ನಡೆಸಲಾಯಿತು ಮತ್ತು ಕೂಡ್ಲಿಗಿ ಪೊಲೀಸ್ ವೃತ್ತ ವ್ಯಾಪ್ತಿಯ ಗುಡೇಕೋಟೆಯಲ್ಲೂ ಪಥಸಂಚಲನ ಆಯಾ ಠಾಣಾ ಪಿಎಸ್ಐ ಹಾಗೂ ಸಿಬ್ಬಂದಿಗಳು ಕೂಡ್ಲಿಗಿ ಸಿಪಿಐ ನೇತೃತ್ವದಲ್ಲಿ ಪಥಸಂಚಲನ ಮೂಲಕ ಜನರಲ್ಲಿ  ಜಾಗೃತಿ ಜಾಥಾ  ನಡೆಸಿಕೊಟ್ಟರು.