ವಾರಕ್ಕೆರಡು ಬಾರಿ ಮೆಣಸಿನಕಾಯಿ ವಹಿವಾಟು ಸಚಿವರ ಸಲಹೆ- ವರ್ತಕರ ಸಹಮತ
ಬ್ಯಾಡಗಿ,ಮಾ.14: ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ವಾರದಲ್ಲಿ ಎರಡು ದಿನ ಮಾತ್ರ ಮೆಣಸಿನಕಾಯಿ ವಹಿವಾಟು ನಡೆಸಿ ಎಂಬ ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಶಿವಾನಂದ ಪಾಟೀಲ ಅವರ ಸಲಹೆಗೆ ವರ್ತಕರು ಸಹಮತ ವ್ಯಕ್ತಪಡಿಸಿದ್ದು, ಇನ್ನು ಮುಂದೆ ಪ್ರತಿ ಸೋಮವಾರ ಮತ್ತು ಗುರುವಾರ ವಹಿವಾಟು ನಡೆಸುವುದಾಗಿ ವರ್ತಕರ ಸಂಘದ ಪದಾಧಿಕಾರಿಗಳು ಸಚಿವರಿಗೆ ಭರವಸೆ ನೀಡಿದರು.
ಮೆಣಸಿನಕಾಯಿ ಬೆಲೆ ಕುಸಿದಿದೆ ಎಂಬ ಕಾರಣಕ್ಕೆ ಬ್ಯಾಡಗಿ ಎಪಿಎಂಸಿಯಲ್ಲಿ ಅಹಿತಕರ ಘಟನೆ ನಡೆದಿದ್ದ ಹಿನ್ನೆಲೆಯಲ್ಲಿ ಸಚಿವ ಶಿವಾನಂದ ಪಾಟೀಲ ಅವರು ಬುಧವಾರ ಬ್ಯಾಡಗಿ ಎಪಿಎಂಸಿಗೆ ಭೇಟಿ ನೀಡಿ ಹಾನಿ ಪರಿಶೀಲನೆ ಮಾಡಿದ ನಂತರ ಮೆಣಸಿನಕಾಯಿ ವರ್ತಕರ ಸಭೆ ನಡೆಸಿ ಮಾತನಾಡುತ್ತ, ವಾರದಲ್ಲಿ ಒಂದು ದಿನ ವಹಿವಾಟು ನಡೆಸುವುದರಿಂದ ಒತ್ತಡ ಹೆಚ್ಚಾಗಲಿದ್ದು, ಇದು ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ವಾರದಲ್ಲಿ ಎರಡು ದಿನ ವಹಿವಾಟು ನಡೆಸಿ, ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಎಪಿಎಂಸಿಯಲ್ಲಿ ಪ್ರತ್ಯೇಕ ಪೆÇಲೀಸ್ ಠಾಣೆ ಆರಂಭಿಸಲಾಗುವುದು. ಸ್ಥಳದ ಕೊರತೆ ನಿವಾರಣೆಗೆ ಅಗತ್ಯ ಭೂಮಿ ಒದಗಿಸಲಾಗುವುದು. ರೈತ ಭವನವನ್ನು ಬಳಕೆಗೆ ಒದಗಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು.
ಎಪಿಎಂಸಿಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು, ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು. ಅಹಿತಕರ ಘಟನೆಯಲ್ಲಿ ಸಂಭವಿಸಿರುವ ನಷ್ಟ ಭರಿಸಲು ಕಾಲಾವಕಾಶ ಬೇಕಾಗಲಿದೆ. ನಿಮ್ಮ ಎಲ್ಲ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿದ್ದು, ಮಾರುಕಟ್ಟೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ವಹಿವಾಟು ನಡೆಸಿಕೊಂಡು ಹೋಗಬೇಕು ಎಂದು ಸಲಹೆ ಮಾಡಿದರು.
ಬಳ್ಳಾರಿ ಮತ್ತು ಮೈಸೂರಿನಲ್ಲಿ ವರ್ತಕರ ಸಂಘದಿಂದಲೇ ರಿಯಾಯಿತಿ ದರದಲ್ಲಿ ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಇದೇ ಮಾದರಿಯಲ್ಲಿ ಬ್ಯಾಡಗಿ ಎಪಿಎಂಸಿಯಲ್ಲೂ ರೈತರಿಗೆ ಊಟದ ವ್ಯವಸ್ಥೆ ಮಾಡಿ ಎಂದು ಸಲಹೆ ಮಾಡಿದ ಸಚಿವರು, ಎಪಿಎಂಸಿಯಿಂದಲೂ ಅಗತ್ಯ ಸಹಕಾರ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ರಾಜ್ಯ ಅರಣ್ಯ ಅಭಿವೃಧ್ದಿ ನಿಗಮದ ಅಧ್ಯಕ್ಷರಾದ
ಶಾಸಕ ಬಸವರಾಜ ಶಿವಣ್ಣನವರ, ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಎಸ್ಪಿ ಅಂಶುಕುಮಾರ್, ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ, ಕಾರ್ಯದರ್ಶಿ ರಾಜು ಮೋಳಗೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.