ಉಚಿತ ಮನೆ ನಿರ್ಮಾಣಕ್ಕೆ ಆಗ್ರಹ
(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು.ಮಾ.೧೪- ದೇವದಾಸಿ ಮಹಿಳೆಯರಿಗೆ ಉಚಿತವಾಗಿ ಮನೆಗಳನ್ನು ನಿರ್ಮಾಣಮಾಡಿ ಕೊಡಬೇಕೆಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಜಿಲ್ಲಾ ಸಮಿತಿ ಆಗ್ರಹಿಸಿದೆ.
ದೇವದಾಸಿ ಮಹಿಳೆಯರಿಗೆ ಉಚಿತ ಮನೆಗಳ ನಿರ್ಮಾಣಕ್ಕೆ ಆಗ್ರಹಿಸಿ ಸಮಿತಿಯಿಂದ ಹಲವಾರು ಬಾರಿ ಹೋರಾಟ ಮಾಡಲಾಗಿದೆ. ಇದರ ಪರಿಣಾಮ ರಾಯಚೂರು ತಾಲ್ಲೂಕಿನ ೨೦೬ ಮಾಜಿ ದೇವದಾಸಿ ಮಹಿಳೆಯರಿಗೆ ಪುನರ್‌ವಸತಿ ಕಲ್ಪಿಸಲು ನಗರದ ಸರ್ವೆ ನಂ.೧೪೦೩ ರಲ್ಲಿ ೫ ಎಕರೆ ಭೂಮಿ ಮಂಜೂರು ಮಾಡಲಾಗಿದೆ.
ಪ್ರತಿ ಮನೆ ನಿರ್ಮಾಣಕ್ಕೆ ೬.೫೦ ಲಕ್ಷ ರೂ.ಗಳನ್ನು ಸರ್ಕಾರ ನಿಗದಿಪಡಿಸಿದೆ. ಫಲಾನುಭವಿಗೆ ೨.೫೦ ಲಕ್ಷ ರೂ.ಗಳನ್ನು ಕೊಳಚೆ ಮಂಡಳಿಯಿಂದ ನೀಡಲಾಗುತ್ತಿದೆ. ಉಳಿದ ಹಣದಲ್ಲಿ ಫಲಾನುಭವಿಗಳಿಗೆ ವಂತಿಗೆ ರೂಪದಲ್ಲಿ ೫೬ ಸಾವಿರ ರೂ.ಗಳನ್ನು ಬ್ಯಾಂಕ್ ಸಾಲದ ಮೂಲಕ ಕಟ್ಟಲು ಸೂಚಿಸಲಾಗಿದೆ ಎಂದು ಸಮಿತಿ ತಿಳಿಸಿದೆ.
ಮಾಜಿ ದೇವದಾಸಿ ಮಹಿಳೆಯರು ಬಹುತೇಕ ದೌರ್ಜಕ್ಕೊಳಗಾಗಿದ್ದಾರೆ. ಯಾವ ಆರ್ಥಿಕ ಹಾಗೂ ಆಸ್ತಿ ಹಿನ್ನೆಲೆ ಉಳ್ಳವರಲ್ಲ. ಇಂತಹ ಮಹಿಳೆಯರಿಗೆ ಪುನರ್ ವಸತಿ ಕಲ್ಪಿಸುವುದು ಸರ್ಕಾರದ ಬಹುದೊಡ್ಡ ಜವಾಬ್ದಾರಿಯಾಗಿದೆ. ಸರ್ಕಾರ ಮಾಸಿಕ ನೀಡುತ್ತಿರುವ ಸಹಾಯಧನದಲ್ಲಿ ಜೀವನ ನಿರ್ವಹಣೆ ಮಾತ್ರ ನಡೆಸಲು ಸಾಧ್ಯ. ಬ್ಯಾಂಕ್ ಸಾಲ ೨ ಲಕ್ಷ ರೂ.ಗಳನ್ನು ಕಟ್ಟಲು ಇವರಿಂದ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಮಾಜಿ ದೇವದಾಸಿಯರ ಆರ್ಥಿಕ ಸ್ಥಿತಿಗತಿಯನ್ನು ಪರಿಗಣಿಸಿ ಅವರಿಗೆ ಉಚಿತ ಮನೆ ನಿರ್ಮಿಸಿಕೊಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾಧ್ಯಕ್ಷೆ ಹೆಚ್.ಪದ್ಮಾ, ಜಿಲ್ಲಾ ಗೌರವಾಧ್ಯಕ್ಷ ಕೆ.ಜಿ ವೀರೇಶ್ ಇದ್ದರು.