ಸಂಸದ ಹೆಗಡೆ ಉಚ್ಛಾಟನೆಗೆ ಆಗ್ರಹ
(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಮಾ.೧೪:ಸಂವಿಧಾನ ಬದಲು ಸಂಬಂಧ ಸಂಸದ ಅನಂತ್‌ಕುಮಾರ್ ಹೆಗಡೆ ನೀಡಿರುವ ಹೇಳಿಕೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಕೆ.ಇ ಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.
ಸಂಸದ ಅನಂತ್‌ಕುಮಾರ್ ಹೆಗಡೆ ಅವರು ಪದೇ ಪದೇ ಸಂವಿಧಾನ ಬದಲಿಸುವ ಹೇಳಿಕೆ ನೀಡುತ್ತಿರುವುದು ಬಿಜೆಪಿಯ ನೈಜ ಸ್ವಭಾವವನ್ನು ಹೊರ ಹಾಕಿದಂತಿದೆ. ಬಿಜೆಪಿ ನಾಯಕರು ಇದು ಹೆಗಡೆ ವೈಯಕ್ತಿಕ ಹೇಳಿಕೆ ಎಂದು ನುಣುಚಿಕೊಳ್ಳುತ್ತಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೆಗಡೆ ವಿರುದ್ಧ ಕ್ರಮಕೈಗೆಳ್ಳುತ್ತಿಲ್ಲ. ಸಂವಿಧಾನದ ಬಗ್ಗೆ ಬಿಜೆಪಿ ಬದ್ಧತೆ ಪ್ರದರ್ಶಿಸಬೇಕಿದೆ. ಈ ನಿಟ್ಟಿನಲ್ಲಿ ಹೆಗಡೆ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕೆಂದು ಕೆ.ಇ ಕುಮಾರ್ ಆಗ್ರಹಿಸಿದ್ದಾರೆ.
ಬಿಜೆಪಿ ತನ್ನ ಅಂತರಂಗವನ್ನು ಸಂಸದ ಅನಂತ್‌ಕುಮಾರ್ ಹೆಗಡೆ ಮೂಲಕ ಬಹಿರಂಗಪಡಿಸುತ್ತಿದೆ. ನಿಜವಾಗಲೂ ಸಂವಿಧಾನವನ್ನು ಗೌರವಿಸುತ್ತಿರುವವರು ದೇಶದ ಪರಿಶಿಷ್ಟರು. ಅನಂತ್‌ಕುಮಾರ್ ಹೆಗಡೆ ಅವರಂತವರಿಗೆ ಪಾಠ ಕಲಿಸುವ ಸಮಯ ಈಗ ಬಂದಿದೆ.
ಚುನಾವಣೆ ಉದ್ದೇಶದಿಂದ ಸಾವಿರ ರೂ. ಏರಿಕೆಯಾಗಿದ್ದ ಸಿಲಿಂಡರ್ ಬೆಲೆಯನ್ನು ೧೦೦ ರೂ. ಇಳಿಕೆ ಮಾಡಿ ಜನರಿಗೆ ವಂಚಿಸಲು ಬಿಜೆಪಿ ಮುಂದಾಗಿದೆ. ಹಿಂದುತ್ವದ ಹೆಸರಿನಲ್ಲಿ ದೇಶದಲ್ಲಿ ವಿಷಬೀಜ ಬಿತ್ತುತ್ತಿದೆ. ಪುಲ್ವಾಮಾ ಘಟನೆ, ೨ ಕೋಟಿ ಉದ್ಯೋಗ, ರೈತರ ಸಮಸ್ಯೆಗಳ ಕುರಿತು ಮಾತನಾಡದ ಬಿಜೆಪಿ, ಮಾಧ್ಯಮಗಳಿಂದ ದೂರವಿರಲು ಇಷ್ಟಪಡುತ್ತಿದೆ. ಬಿಜೆಪಿ ಸರ್ಕಾರ ಸಂವಿಧಾನ ವಿಚಾರಕ್ಕೆ ಕೈ ಹಾಕಿದರೆ ದಲಿತ ಸಮುದಾಯ ಮತ್ತೊಂದು ಗೊರೆಗಾಂವ್ ಯುದ್ಧಕ್ಕೆ ಸಿದ್ಧವಿದೆ.
ಸಂವಿಧಾನ ಬದಲು ಹೇಳಿಕೆಗೆ ಆರ್‌ಎಸ್‌ಎಸ್ ಸಂಸದ ಹೆಗಡೆಯನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ದಲಿತರು,ಅಲ್ಪಸಂಖ್ಯಾತರು ಎಚ್ಚೆತ್ತುಕೊಳ್ಳಬೇಕೆಂದು ಕೆಪಿಸಿಸಿ ಜಿಲ್ಲಾ ಮಾಧ್ಯಮ ವಕ್ತಾರ ಪರಿಶಿಷ್ಟ ಜಾತಿ ವಿಭಾಗದ ಕೆ.ಇ. ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.