ಪ್ರಗತಿ ಪರಿಶೀಲನಾ ಸಭೆ
ಲಕ್ಷ್ಮೇಶ್ವರ,ಮಾ14: ತಾಲೂಕ ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಶಾಸಕ ಚಂದ್ರು ಲಮಾಣಿ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನ ಸಭೆ ಜರುಗಿತು.
ಸಭೆಯಲ್ಲಿ ಈಗ ಅಂಗನವಾಡಿ ಮಕ್ಕಳಿಗೆ ಈ ಮುಂಚೆ ವಿತರಿಸುತ್ತಿದ್ದ ಆಹಾರಗಳ ಬದಲಾಗಿ ಕಿಚಡಿ ನೀಡುತ್ತಿದ್ದು ಅದನ್ನು ಮಕ್ಕಳು ತಿನ್ನಲು ನಿರಾಕರಿಸುತ್ತಿವೆ ಈ ಕೂಡಲೇ ಸರ್ಕಾರ ಮೊದಲಿನಂತೆ ಅಂಗನವಾಡಿಗಳಿಗೆ ನೀಡುತ್ತಿದ್ದ ಮೊಳಕೆ ಕಾಳು ಮತ್ತಿತರ ತಿನಿಸುಗಳನ್ನು ನೀಡಬೇಕು ಎಂದು ಸಭೆಯಲ್ಲಿ ಸರ್ಕಾರಕ್ಕೆ ನಿರ್ಣಯ ಕೈಗೊಳ್ಳಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮೃತ್ಯುಂಜಯ ಗುಡ್ಡದ ಅನ್ವೇರಿಯವರು ಇಲಾಖೆಯ ಮೇಲೆ ಚರ್ಚೆ ನಡೆಯುತ್ತಿದ್ದಾಗ ಶಾಸಕ ಚಂದ್ರು ಲಮಾಣಿ ಅವರು ಮಕ್ಕಳು ಪ್ರಕೃತಿಗೆ ಸಲ್ಲದ ಮತ್ತು ತಿನ್ನಲು ರುಚಿ ಕಟ್ಟುವಲ್ಲದ ಕಿಚಡಿಯನ್ನು ತಿರಸ್ಕರಿಸುತ್ತಿದ್ದಾರೆ ಏಕೆ ನೀವು ಇವುಗಳನ್ನು ನೀಡುತ್ತಿರಿ ಎಂದು ಪ್ರಶ್ನಿಸಿದರು. ಆಗ ಅಧಿಕಾರಿ ಸರ್ಕಾರ ಬದಲಾವಣೆ ಮಾಡಿ ಕಿಚಡಿ ಕಳಿಸುತ್ತಿದ್ದು ಅದನ್ನು ಎಲ್ಲಾ ಅಂಗನವಾಡಿಗಳಿಗೆ ಪೂರೈಸಲಾಗುತ್ತದೆ ಎಂದರು.
ಸಭೆಯಲ್ಲಿ ಸರ್ಕಾರದ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಂದರೆ ಲ್ಯಾಂಡ್ ಆರ್ಮಿ ತಾಲೂಕಿನಲ್ಲಿ ಕೈಗೊಂಡಿರುವ ಎಲ್ಲಾ ಕಾಮಗಾರಿಗಳು ಅರ್ಧಂಬರ್ಧ ಆಗಿದ್ದು ಸುಮಾರು ಎಂಟರಿಂದ ಹತ್ತು ಕೋಟಿ ಕಾಮಗಾರಿಗಳು ಕಳಪೆಯಾಗಿದ್ದು ಕಳೆದ ಐದು ವರ್ಷಗಳಲ್ಲಿನ ಎಲ್ಲಾ ಕಾಮಗಾರಿಗಳ ಕುರಿತು ಸಮಗ್ರ ತನಿಖೆ ಮಾಡಲು ತಂಡ ರಚಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.
ತೋಟಗಾರಿಕಾ ಇಲಾಖೆಗೆ ಸಂಬಂಧಪಟ್ಟಂತೆ ಹಿರಿಯ ಸಹಾಯಕ ನಿರ್ದೇಶಕರಾದ ಸುರೇಶ್ ಕುಂಬಾರ್ ಅವರು ಎನ್ ಆರ್ ಇ ಜಿ ಯೋಜನೆಯಡಿ ಪ್ರತ್ಯೇಕ ಕ್ರಿಯಾ ಯೋಜನೆ ನೀಡುವಂತೆ ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಅವರು ಕೈಗೊಳ್ಳುವ ಕಾಮಗಾರಿಗಳ ಕುರಿತು ಹಾಗೂ ಫಲಾನುಭವಿಗಳ ಕುರಿತು ಸಮಗ್ರ ಮಾಹಿತಿ ನೀಡಿದರೆ ಪ್ರತಿ ಗ್ರಾಮ ಪಂಚಾಯತಿಯಿಂದ ಎಂ ಎನ್ ಆರ್ ಇ ಜಿ ಯೋಜನೆ ಅಡಿ ಕ್ರಿಯಾಯೋಜನೆ ಸಿದ್ಧಪಡಿಸಲು ಸೂಚಿಸುವದಾಗಿ ಹೇಳಿದರು.
ಅರಣ್ಯ ಮತ್ತು ಸಾಮಾಜಿಕ ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಶಾಸಕರು ಗೊಜನೂರು ಗುಡ್ಡದ ಬಳಿ ಈಗಿರುವ ಪ್ರದೇಶದಲ್ಲಿ ಸಸಿಗಳನ್ನು ನೋಡುವಂತೆ ಸೂಚಿಸಿದರು ಅದಕ್ಕೆ ಸ್ಪಂದಿಸಿದ ಉಭಯ ಇಲಾಖೆಯ ಅಧಿಕಾರಿಗಳು ಜೂನ್ ತಿಂಗಳಲ್ಲಿ ಸಸಿ ನೆಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೇಲೆ ನಡೆದ ಚರ್ಚೆಯಲ್ಲಿ ತಾಲೂಕ ವೈದ್ಯಾಧಿಕಾರಿ ಸುಭಾಷ್ ದಾಯಗೊಂಡ ಅವರು ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕ ಕಳಿಸುವಂತೆ ಮನವಿ ಮಾಡಿದರು ಇದಕ್ಕೆ ಉತ್ತರಿಸಿದ ಶಾಸಕರು ಅನೇಕ ಆಸ್ಪತ್ರೆಗಳು ಸರ್ಕಾರದಿಂದ ಒಮ್ಮೆಲೆ ಹಲವು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಯೋಜನೆ ಇಲಾಖೆ ಹೊಂದಿದೆ ಎಂದರು.
ಸಭೆಯಲ್ಲಿ ಕೃಷಿ ಇಲಾಖೆಯ ರೇವಣಸಿದ್ದಪ್ಪ ಮನಗೋಳಿ ಲೋಕೋಪಯೋಗಿ ಇಲಾಖೆಯ ಎಫ್. ಎಚ್. ತಿಮ್ಮಾಪುರ ಸೇರಿದಂತೆ ಇಲಾಖಾಧಿಕಾರಿಗಳು ಇದ್ದರು.
ವೇದಿಕೆಯ ಮೇಲೆ ತಹಶೀಲ್ದಾರ್ ವಾಸುದೇವ್ ವಿ. ಸ್ವಾಮಿ, ತಾಲೂಕ ಪಂಚಾಯಿತಿ ಆಡಳಿತ ಅಧಿಕಾರಿ ಜಗದೇವ ಬಿ., ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾರ್ ಕೃಷ್ಣಪ್ಪ ಉಪಸ್ಥಿತರಿದ್ದರು.