ಅನಿಷ್ಠಕಾರಿ  ಸಾಮಾಜಿಕ ಆಚರಣೆಗಳ ವಿರುದ್ಧ ಸತ್ಯಕ್ಕ ಪ್ರತಿರೋಧ
(ಸಂಜೆವಾಣಿ ವಾರ್ತೆ)
 ಬಳ್ಳಾರಿ ಮಾ 14 ಅನುಭವ ಮಂಟಪದ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪಡೆದ ಸತ್ಯಕ್ಕ ಅನಿಷ್ಟಕಾರಿ ಸಾಮಾಜಿಕ ಆಚರಣೆಗಳ ವಿರುದ್ಧ ಪ್ರತಿರೋಧವನ್ನು ಒಡ್ಡಿದ್ದರು. ಅನ್ಯಾಯ , ಭ್ರಷ್ಟಾಚಾರದಿಂದ ಗಳಿಸುವ ಸಂಪತ್ತು ಅಯೋಗ್ಯ ಎಂದು ಬಗೆದಿದ್ದರು ಎಂದು ರೂಪನಗುಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಬಿ .ರಾಜೇಶ್ವರಿ ಅಭಿಪ್ರಾಯ ಪಟ್ಟರು.
ತಾಲೂಕಿನ ಹಂದಿಹಾಳು ಗ್ರಾಮದ ಶಿವಶರಣರ ಮಠದಲ್ಲಿ ಆಯೋಜಿಸಿದ್ದ ಶಿವ ಚಿಂತನ ಗೋಷ್ಠಿಯಲ್ಲಿ ‘ ಸತ್ಯಕ್ಕನ ವಚನಗಳಲ್ಲಿ ಜೀವನ ಮೌಲ್ಯಗಳು ‘ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು.
ಸತ್ಯಕ್ಕನ ವಚನಗಳಲ್ಲಿ ಕಾಯಕ ಮತ್ತು ದಾಸೋಹ ಪ್ರಜ್ಞೆ ,ಸ್ತ್ರೀ ಸಮಾನತೆ, ಸಾಮಾಜಿಕ ಕಳಕಳಿ ಬದುಕಿನ ಮುಖ್ಯ ಮೌಲ್ಯಗಳಾಗಿದ್ದವು . ಶಿವಶರಣರ ಸತ್ಯ ಮಾರ್ಗದ ಬದುಕು, ಜೀವನಾನುಭವ, ಲೋಕಾನುಭವವನ್ನು ನಿಜದ ನೆಲೆಯಲ್ಲಿ ನಮ್ಮದಾಗಿಸಿಕೊಂಡಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ವಿಶ್ರಾಂತ ಮುಖ್ಯೋಪಾಧ್ಯಾಯರಾದ ಜೋಳದರಾಶಿ ಪಂಪನಗೌಡ ಶಿವಶರಣರು ಅಂತರಂಗ ಮತ್ತು ಬಹಿರಂಗ ಸಾಮರಸ್ಯದ ಸಾಧಕರಾಗಿದ್ದರು.ಮಾನವನ ಘನತೆಯನ್ನು ಅವನ ಕಾಯಕನಿಷ್ಠೆಯಿಂದಲೇ ಎತ್ತಿ ಹಿಡಿದರು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಠದ ಧರ್ಮದರ್ಶಿ ಡಾ.ಎಚ್.ಮಲ್ಲಿಕಾರ್ಜನ ಗೌಡ ಇಂದಿನ ರೋಗಗ್ರಸ್ತ ಸಮಾಜಕ್ಕೆ ಶರಣರ ಚಿಂತನೆಗಳು ಸಂಜೀವಿನಿಯಂತಿವೆ.ಅವರ ಆಲೋಚನೆ ಮತ್ತು ಅರ್ಥಪೂರ್ಣವಾದ ಬದುಕು ಎಂದೆಂದೂ ಮಾದರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರಳಾದೇವಿ ಕಾಲೇಜಿನ ಪ್ರಾಧ್ಯಾಪಕ ಡಾ.ದಸ್ತಗೀರಸಾಬ್ ದಿನ್ನಿ ಶರಣ ಸಾಹಿತ್ಯದಲ್ಲಿ ನೇರ ನಡೆ ನುಡಿಯ ಸತ್ಯಕ್ಕಳಿಗೆ ಅಪರೂಪದ ಸ್ಥಾನವಿದೆ. ಅವರು ಸಂಖ್ಯಾ ದೃಷ್ಟಿಯಿಂದ ಕೆಲವೇ ವಚನಗಳನ್ನು ಬರೆದಿದ್ದರೂ ಅವು ಸತ್ವಯುತವಾಗಿವೆ. ಕಸಗೂಡಿಸುವ ಕಾಯಕದಲ್ಲಿ ನಿರತಳಾಗಿದ್ದ ಸತ್ಯಕ್ಕ ಅಕ್ಕಮಹಾದೇವಿಯಂತೆ ವಿರಾಗಿಣಿಯ ಬದುಕನ್ನು ಸಾಗಿಸಿದವರು.ಕಾಯಕ ತತ್ವದೊಂದಿಗೆ  ಶಿವಪಾರಮ್ಯ ಮತ್ತು ಏಕದೇವತಾ ನಿಷ್ಠೆಯನ್ನು ಮೆರೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿಶ್ರಾಂತ  ಉಪನ್ಯಾಸಕ ಶಿವಾನಂದ  ಹೊಂಬಾಳ , ಉಪನ್ಯಾಸಕ ಡಾ.ಶ್ರೀನಿವಾಸ ಮೂರ್ತಿ,ರಂಗಕರ್ಮಿ ಎಂ.ಎಂ.ಪಿ.ವೀರೇಶ ಸ್ವಾಮಿ ಮಾತನಾಡಿದರು. ಶ್ರೀಪಾದ ಭಟ್,ಚಾಂದಪಾಷಾ, ವನಜಾಕ್ಷಿ, ಪುರುಷೋತ್ತಮ ಮುಂತಾದವರಿದ್ದರು