ಬೆವರು ಇತಿಹಾಸದ ತವರು : ಹಾರಕೂಡ ಶ್ರೀ
ಬೀದರ:ಸೆ.17:ಎಲ್ಲಿ ಪ್ರಾಮಾಣಿಕವಾದ ಪರಿಶ್ರಮ ಹಾಗೂ ನಿರಂತರ ಪ್ರಯತ್ನದ ಬೆವರು ಹನಿಗಳು ಸುರಿಯುತ್ತವೆಯೋ ಅಲ್ಲಿ ಹೊಸ ಇತಿಹಾಸ ಸೃಷ್ಟಿಸಬಹುದಾಗಿದೆ ಎಂದು ಹಾರಕೂಡದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯ 2015 -16ನೇ ಸಾಲಿನ 9ನೇ ಬ್ಯಾಚ್ ವಿದ್ಯಾರ್ಥಿಗಳಿಂದ ಆಯೋಜಿಸಿದ ಗುರುವಂದನೆ ಹಾಗೂ 713ನೇ ತುಲಾಭಾರ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅಮೃತ ನುಡಿಧಾರೆ ಕರುಣಿಸಿದ ಶ್ರೀಗಳು, ಈ ಪೃಥ್ವಿಯ ಮೇಲೆ ದುಡಿಮೆ ಇಲ್ಲದೆ ತಿನ್ನುವ ಅಧಿಕಾರಯಾರಿಗೂ ಇಲ್ಲ.
ತಮ್ಮ ಸ್ವಂತ ದುಡಿಮೆಯಿಂದ ಅಗತ್ಯಗಳನ್ನು ಪೂರೈಸಿಕೊಳ್ಳಬೇಕೆ ವಿನ: ಅನ್ಯರ ದುಡಿಮೆಯಿಂದಲ್ಲ.
ಪರಿಶ್ರಮದಲ್ಲಿ ಪರಮಾತ್ಮನನ್ನು ಕಾಣಬೇಕು, ಸಮಾಜದಿಂದ ಕೇವಲ ಫಲಾಪೇಕ್ಷೆ ಬಯಸುವ ವ್ಯಕ್ತಿಗಳಾಗದೆ ಸಮಾಜಕ್ಕೆ ಫಲ ನೀಡುವಂತಹ, ಸಮಾಜದ ಉನ್ನತಿಗೆ ಶ್ರಮಿಸುವಂತಹ ಆದರ್ಶ ವ್ಯಕ್ತಿತ್ವ ನಮ್ಮದಾಗಬೇಕು.
ನಾವು ಪಡೆದ ಶಿಕ್ಷಣ ವೈಯಕ್ತಿಕ ಬದುಕಿಗಷ್ಟೇ ಸೀಮಿತವಾಗದೆ ರಂಗುರಂಗಿನ ಸಮಾಜದ ನಿರ್ಮಾಣಕ್ಕೆ ಇಂಬು ನೀಡುವಂತಿರಬೇಕು.
ತಂದೆ ತಾಯಿಯರ ಸೇವೆಯಲ್ಲಿ ಸ್ವರ್ಗವನ್ನು ಕಾಣುವಂತಹ ಸಂತತಿ ಇಂದಿನ ಸಮಾಜಕ್ಕೆ ಅಗತ್ಯವಾಗಿ ಬೇಕಿರುವುದರಿಂದ ವಿದ್ಯಾಸಂಸ್ಥೆಗಳು ಈ ನಿಟ್ಟಿನಲ್ಲಿ ಹಿರಿಯರನ್ನು ಗೌರವಿಸುವ ಸೇವೆಗೈಯುವಂತಹ ಚಾರಿತ್ರ್ಯ ಶೀಲ ಪ್ರಜೆಗಳನ್ನು ನೀಡಬೇಕಿರುವದು ತುರ್ತು ಅಗತ್ಯಗಳಲ್ಲಿ ಒಂದಾಗಿದೆ ಎಂದರೆ ತಪ್ಪಾಗದು.
ಕುಟುಂಬ ಸಮಾಜದ ಮೂಲ ಘಟಕವಾಗಿರುವುದರಿಂದ ಪ್ರತಿ ಮನೆಯೂ ಮಂತ್ರಾಲಯವಾಗಿರಬೇಕೆನ್ನುವುದೇ ನಮ್ಮ ಸದಾಶಯ ಎಂದು ನುಡಿದರು.
ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯ 9ನೇ ಬ್ಯಾಚ್ ವಿದ್ಯಾರ್ಥಿಗಳು ಸೇರಿ ಭಕ್ತಿಯಿಂದ ಸಮರ್ಪಿಸಿದ ಗುರುವಂದನೆ ಹಾಗೂ ತುಲಾಭಾರ ಸೇವೆ ನಿಮ್ಮೆಲ್ಲರ ಭವಿಷ್ಯದ ಸಫಲತೆಗೆ ಸ್ಪೂರ್ತಿಯಾಗಿ ನಿಲ್ಲಲಿ ಹಾಗೂ ಹಾರಕೂಡ ಧೀಶ ಯಾವತ್ತು ಸನ್ಮಂಗಳವನ್ನುಂಟು ಮಾಡಲಿ ಎಂದು ಶುಭ ಹಾರೈಸಿದರು.
ಅಂಬರೀಶ ಕನಕಪುರ ಮಾತನಾಡಿದರು.
ಪ್ರವೀಣ ರೆಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಪರಮೇಶ್ವರ ಹೊಳಕುಂದೆ, ಡಾ. ರಾಜಶೇಖರ ಮದ್ರಿ, ಪ್ರಹ್ಲಾದ ಚೌವ್ಹಾಣ ಉಪಸ್ಥಿತರಿದ್ದರು, ಶಾಲೆಯ 9ನೇ ಬ್ಯಾಚ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ಅಂಬಾದಾಸ ಸಸ್ತಾಪುರ.
ಅಂಬರೀಶ ಕನಕಪೂರ ನಿರೂಪಿಸಿ, ವಂದಿಸಿದರು.