ಧರ್ಮಸ್ಥಳ ಸಂಸ್ಥೆಯ ಯೋಜನೆಗಳು ವಿಭಿನ್ನವಾಗಿವೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.14: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಒಂದಕ್ಕಿಂತ ಮತ್ತೊಂದು ವಿಭಿನ್ನವಾದ ಯೋಜನೆಗಳಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ತಿಳಿಸಿದರು.
ಅವರು ತಾಲ್ಲೂಕಿನ ಹರಿಹರಪುರ ಗ್ರಾಮದ ಹರಿಹರೇಶ್ವರ ದೇವಾಲಯದ ಆವರಣದಲ್ಲಿ ಧರ್ಮಸ್ಥಳ ಸಂಸ್ಥೆಯ ವಲಯ ಮಟ್ಟದ ಸಾಧನಾ ಸಮಾವೇಶ ಮತ್ತು ಸಹಸ್ರ ಬಿಲ್ವಾರ್ಚನೆ ಪೂಜಾ ಕಾರ್ಯಕ್ರಮ ಹಾಗೂ ಬೀದಿ ವ್ಯಾಪಾರಿಗಳ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ತಮ್ಮ ಕೌಟುಂಬಿಕ ಜೀವನ ನಿರ್ವಹಣೆಗೆ ಹಾಗೂ ಆರ್ಥಿಕ ಸ್ವಾವಲಂಭನೆ ಸಾಧಿಸುವ ದೃಷ್ಟಿಯಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಬೀದಿ ಬದಿ ವ್ಯಾಪಾರಿಗಳ ಸಂಘವನ್ನು ಪ್ರಾರಂಭಿಸುತ್ತಿದ್ದು ಈ ಯೋಜನೆಯು ಮಹಿಳೆಯರು ಹಾಗೂ ಜನಸಾಮಾನ್ಯರಿಗೆ ಸಣ್ಣಪುಟ್ಟ ವ್ಯಾಪಾರ ಮಾಡುವವರಿಗೆ ಆರ್ಥಿಕ ಸ್ವಾವಲಂಭನೆ ಸಾಧಿಸಲು ಸಹಕಾರಿಯಾಗಲಿದೆ. ಬೀದಿಬದಿ ವ್ಯಾಪಾರಿಗಳು ಮಳೆ, ಬಿಸಿಲು, ಚಳೀ ಎನ್ನದೆ ಧೂಳು ಕುಡಿದು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಆಸಕ್ತಿಯಿಂದ ವ್ಯಾಪಾರ ಮಾಡುತ್ತಿದ್ದು ಅವರಿಗೆ ಈ ಯೋಜನೆಯ ಲಾಭ ದೊರಕಲಿ ಎಂದರು.
ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ ನಮ್ಮ ಸಂಸ್ಥೆಯು ಸಮಾಜದಲ್ಲಿ ಒಬ್ಬ ವ್ಯಕ್ತಿ ಆರ್ಥಿಕವಾಗಿ ಸದೃಢ ಬದುಕನ್ನು ಸಾಗಿಸಲು ಅಗತ್ಯವಿರುವ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ಹಾಗೂ ನೈಜ ಫಲಾನುಭವಿಗಳು ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ನೆಡೆಸಬೇಕು ಎಂದು ಕೇಶವ ದೇವಾಂಗ ತಿಳಿಸಿದರು.
ಕಾರ್ಯಕ್ರಮದಲ್ಲಿ ಹರಿಹರಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದ್ರಮ್ಮ ಮಂಜೇಗೌಡ, ಸಮಾಜ ಸೇವಕರಾದ ವಿಶ್ರಾಂತ ಇಂಜಿನಿಯರ್ ಲಕ್ಷ್ಮೀಪುರಕುಮಾರಸ್ವಾಮಿ, ಯೋಜನಾಧಿಕಾರಿ ವೀರೇಶಪ್ಪ, ಜನಜಾಗೃತಿ ವೇದಿಕೆ ಸದಸ್ಯ ಡಿ.ಸಿ.ಕುಮಾರ್, ಸ್ಥಳೀಯ ಒಕ್ಕೂಟದ ಅಧ್ಯಕ್ಷೆ ಯಶೋದಮ್ಮ, ಮುಖಂಡರಾದ ಲಕ್ಷ್ಮೀಪ್ರಸನ್ನ, ಗಂಜಿಗೆರೆಮಹೇಶ್, ಮೇಲ್ವಿಚಾರಕಿ ಭಾಗ್ಯಮ್ಮ, ಸೇವಾಪ್ರತಿನಿಧಿಗಳಾದ ಯಶೋದಾ, ಗೀತಾ, ಶೋಭಾ, ಲಲಿತ, ಲಕ್ಷ್ಮೀದೇವಿ ಸೇರಿದಂತೆ ಪ್ರಗತಿ ಬಂಧು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯೆಯರು ಹಾಜರಿದ್ದರು.