ಹೆದ್ದಾರಿ ರಸ್ತೆ ನಿರ್ಮಾಣ ಶಾಲೆ ಕಾಂಪೌಂಡ್ ತೆರವುಶಾಲೆ ಕಾಂಪೌಂಡ್ ನಿರ್ಮಾಣಕ್ಕೆ ಒತ್ತಾಯ :
ಸಂಜೆವಾಣಿ ವಾರ್ತೆ
ಔರಾದ್ : ಮಾ.14: ತಾಲೂಕಿನ ಮುಸ್ತಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಂಪೌಂಡ್ ಗೋಡೆ, ಶೌಚಾಲಯ ಕೋಣೆ ತೆರವು ಮಾಡಿದರಿಂದ ಇಲ್ಲಿನ ಶಿಕ್ಷಕ, ವಿದ್ಯಾರ್ಥಿಗಳು ತೊಂದರೆಗೆ ಒಳಗಾಗಿದ್ದಾರೆ.
ಬೀದರ-ಔರಾದ್ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಮಾಡುವ ವೇಳೆ ಮುಸ್ತಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್, ಶೌಚಾಲಯ ಕೋಣೆ ಮತ್ತು ಗ್ರಾಮದ ಕುಡಿಯುವ ನೀರಿನ ಪೈಪ್ ಲೈನ್ ತೆರವುಗೊಳಿಸಿದ್ದಾರೆ. ಇದರಿಂದ ಶಾಲೆಯ ಮಕ್ಕಳು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಈಚೇಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಶಾಲೆಯ ಕಾಂಪೌಂಡ್, ನೀರಿನಪೈಪ್ ಲೈನ್ ಮತ್ತು ಶೌಚಾಲಯ ಕೋಣೆ ತೆರವು ಮಾಡುವ ವೇಳೆ ರಸ್ತೆಯ ಕಾಮಗಾರಿ ಮುಗಿದ ಬಳಿಕ ತೆರವು ಮಾಡಿರುವ ಎಲ್ಲವೂ ಕಾಮಗಾರಿ ಮಾಡಿಕೊಡಲಾಗುತ್ತದೆ ಎಂದು ಹೇಳಿದ್ದರು. ಆದರೆ ಈಗ ರಸ್ತೆಯ ಕಾಮಗಾರಿ ಮುಗಿದಿದ್ದು, ಇನ್ನೂ ಶಾಲೆಯ ತೆರವು ಮಾಡಿರುವ ಕಾಂಪೌಂಡ್, ಶೌಚಾಲಯ ನಿರ್ಮಾಣ ಮಾಡುತ್ತಿಲ್ಲ ಎಂದು ದೂರಿದ್ದಾರೆ.
ಈಗಾಗಲೇ ಹೆದ್ದಾರಿ ರಸ್ತೆ ನಿರ್ಮಾಣವಾದ ಕಾರಣ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಶಾಲೆಯ ಕಾಂಪೌಂಡ್ ಇಲ್ಲದ ಕಾರಣ ನಿತ್ಯ ಮಕ್ಕಳಿಗೆ ಶಾಲೆಗೆ ಕಳುಹಿಸಲು ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪಾಲಕರು ದೂರಿದ್ದಾರೆ.
ಔರಾದ ತಹಸೀಲ್ ಕಚೇರಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಜನಸ್ಪಂದನಾ ಸಭೆಯಲ್ಲಿ ಶಾಲೆಯ ಬಗ್ಗೆ ದೂರು ಸಲ್ಲಿಸಿದ್ದೇವೆ. ಈ ವೇಳೆ ಸ್ಥಳದಲ್ಲಿಯೇ ಕಂಪನಿಯ ಗುತ್ತಿಗೆದಾರರಿಗೆ ಶೌಚಾಲಯ, ಕಾಂಪೌಂಡ್, ಪೈಪ್ ಲೈನ್ ಕಾಮಗಾರಿ ಮಾಡಿಕೊಡುವಂತೆ ಸೂಚಿಸಲಾಯಿತು. ಆದರೆ 2-3 ತಿಂಗಳು ಕಳೆದರು ಇನ್ನೂ ಕಾಮಗಾರಿ ಮಾಡಿಲ್ಲ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾರದೊಳಗೆ ಸಮಸ್ಯೆಗೆ ಸ್ಪಂದಿಸಬೇಕು ಇಲ್ಲವಾದಲ್ಲಿ ಕಾನೂನು ಪ್ರಕಾರ ಉಗ್ರಹೋರಾಟ ಮಾಡಲಾಗುತ್ತದೆ ಎಂದು ಗ್ರಾಮದ ಪ್ರಮುಖರಾದ ಏವನಕುಮಾರ ಲಾದೇಕರ್, ದೇವಿದಾಸ ಶ್ರೀಮಂಗಲೆ, ಸುಧಾಕರ ಮುಸ್ತಾಪೂರ, ಕಲ್ಲಪ್ಪ ನಾಗಪ್ಪ ಅವರು ಜಿಲ್ಲಾಧಿಕಾರಿಗಳಿಗೆ ಮನವಿಪತ್ರದಲ್ಲಿ ಸಲ್ಲಿಸಿದ್ದಾರೆ.