ಕಟ್ಟ ಕಡೆಯ ವ್ಯಕ್ತಿಗೂ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ: ಸಚಿವ ಶಿವಾನಂದ ಪಾಟೀಲ
ಸಂಜೆವಾಣಿ ವಾರ್ತೆ
ವಿಜಯಪುರ ಮಾ. 14: ಸರ್ಕಾರದ ಪಂಚ ಯೋಜನೆಗಳಾದ ಅನ್ನಭಾಗ್ಯ, ನಾರಿಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ ಯೋಜನೆಗಳು ಜನರ ಮನೆಬಾಗಿಲಿಗೆ ತಲುಪಿಸುವಲ್ಲಿ ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಪಂಚ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಮನೆ ಬಾಗಿಲಿಗೆ ಬರುತ್ತಾರೆ. ಸರ್ಕಾರದ ಯೋಜನೆಗಳಿಂದ ಯಾರೂ ವಂಚಿತರಾಗಬಾರದು. ಇದನ್ನು ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಗುರಿ ಸರ್ಕಾರಕ್ಕೆ ಇದೆ ಎಂದು ಬಸವನ ಬಾಗೇವಾಡಿ ಮತಕ್ಷೇತ್ರದ ಶಾಸಕರು ಹಾಗೂ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಹೇಳಿದರು.
ಬುಧವಾರ ನಿಡಗುಂದಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಪ್ರೌಡಶಾಲೆಯ ಆವರಣದಲ್ಲಿ ನಡೆದ ಬಸವನ ಬಾಗೇವಾಡಿ, ಕೊಲ್ಹಾರ, ನಿಡಗುಂದಿ, ತಾಲೂಕುಗಳ ವ್ಯಾಪ್ತಿಯ ಬಸವನ ಬಾಗೇವಾಡಿ ವಿಧಾನಸಭಾ ಮತಕ್ಷೇತ್ರದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನ್ನಭಾಗ್ಯ ಯೋಜನೆಯಡಿ 5 ಕೆಜೆ ಅಕ್ಕಿ ವಿತರಿಸಲಾಗುತ್ತಿದೆ. ಉಳಿದ ಅಕ್ಕಿಯ ಮೊತ್ತ 175 ರೂಪಾಯಿಗಳನ್ನು ಡಿಬಿಟಿ ಮೂಲಕ ಫಲಾನುಭವಿಯ ಖಾತೆಗೆ ಹಾಕಲಾಗುತ್ತಿದೆ. ಶಾಲಾ ಮಕ್ಕಳಿಗೆ ವಾರಕ್ಕೆ 5 ದಿವಸ ಹಾಲು ನೀಡಲಾಗುತ್ತಿದೆ. ಮಕ್ಕಳಿಗೆ ಶೂ ಭಾಗ್ಯ, ಕೃಷಿಭಾಗ್ಯ, ಶಾದಿಬಾಗ್ಯ, ಮನಸ್ವಿನಿ, ಯಶಶ್ವಿನಿ ಯೋಜನೆಗಳು ಜಾರಿಗೆ ಮಾಡಲಾಗಿದೆ.
ನಾರಿ ಶಕ್ತಿ ಯೋಜನೆಯಿಂದ ಮಹಿಳೆಯರು ರಾಜ್ಯದ ತುಂಬೆಲ್ಲಾ ಸಂಚಾರ ಮಾಡುತ್ತಿದ್ದಾರೆ. ಅವರು ದೇವಸ್ಥಾನ, ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಿರುವುದರಿಂದ ಸರ್ಕಾರಕ್ಕೆ ಆದಾಯ ಬರುತ್ತಿದೆ. ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಅಭ್ಯಾಸ ಮಾಡಲು ಗೃಹಜ್ಯೋತಿ ಯೋಜನೆ ಸಹಕಾರಿಯಾಗಿದೆ. ಗೃಹಲಕ್ಷ್ಮೀ ಯೋಜನೆಯಿಂದ ಹೆಣ್ಣು ಮಕ್ಕಳು ಸ್ವಾಲಂಬಿಯಿಂದ ಬದುಕು ನಡೆಸುತ್ತಿದ್ದಾರೆ. ಯುವನಿಧಿಯಿಂದ ಉದ್ಯೋಗ ಅರಸುತ್ತಿರುವ ಯುವಕ ಯುವತಿಯರಿಗೆ ಸಹಾಯ ಆಗುತ್ತದೆ ಎಂದು ಹೇಳಿದರು.
ಬಸವನ ಬಾಗೇವಾಡಿ ಕ್ಷೇತ್ರದಲ್ಲಿ 80 ಸಾವಿರ ಕುಟುಂಬಗಳಿಗೆ ಈ ಯೋಜನೆಗಳ ಲಾಭ ಸಿಗುತ್ತಿದ್ದು, ನೂರಕ್ಕೆ ನೂರರಷ್ಟು ಈ ಯೋಜನೆಗಳು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದರು.
ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕøತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿದೆ. ಅದರಂತೆ ಸರ್ಕಾರ ಶರಣರ ಆಶಯದಂತೆ ಆಡಳಿತ ನಡೆಸುತ್ತಿದೆ. ಆಲಮಟ್ಟಿಯಲ್ಲಿ ಮೀನುಗಾರಿಕೆ ಸಂಶೋಧನ ಕೇಂದ್ರ ಸ್ಥಾಪಿಸಲು ಸರ್ಕಾರ ಬಜೆಟ್ ನಲ್ಲಿ ಒಪ್ಪಿಗೆ ನೀಡಿದೆ. ಇದು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಟಿ,ಭೂಬಾಲನ್, ಸರ್ಕಾರದ ಪಂಚ ಯೋಜನೆಗಳಾದ ಅನ್ನಭಾಗ್ಯ, ನಾರಿಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ ಯೋಜನೆಗಳು ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಅನುಷ್ಠಾನಕ್ಕೆ ತರಲಾಗಿದೆ. ಈ ಯೋಜನೆಗಳು ಮುಂದಿನ ಭವಿಷ್ಯಕ್ಕೆ ಸಹಕಾರಿ ಆಗಿವೆ. ಬಹುತೇಕ ಕುಟುಂಬಗಳು ಆರ್ಥಿಕವಾಗಿ ಸಾಮಾಜಿಕವಾಗಿ ಮುನ್ನೆಡೆಗೆ ಬರಲು ಸಹಕಾರಿಯಾಗಿವೆ. ಈ ಯೋಜನೆಗಳನ್ನು ಸಮಪರ್ಕವಾಗಿ ಅನುಷಾನಕ್ಕೆ ತರಲು ಅಧಿಕಾರಿಗಳು ಉತ್ಸುಕರಾಗಿದ್ದಾರೆ. ಸಾರ್ವಜನಿಕರು ಈ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಮಾವೇಶದಲ್ಲಿ ಉಚಿತ ಆರೋಗ್ಯ ಶಿಬಿರ ಹಾಗೂ ಸ್ಥಳದಲ್ಲಿಯೇ ಗ್ಯಾರಂಟಿ ಯೋಜನೆಗಳ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ವಿವಿಧ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಆದೇಶ ಪ್ರತಿಯನ್ನು ನೀಡಲಾಯಿತು. ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು.
ವೇದಿಕೆ ಮೇಲೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಶಿ ಆನಂದ, ಮಾಜಿ ಶಾಸಕ ರಾಜು ಆಲಗೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದಿ ಇಲಾಖೆಯ ಉಪನಿರ್ದೇಶಕ ಕೆ.ಕೆ. ಚವ್ಹಾಣ, ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ , ಹೆಸ್ಕಾಂ ಅಧೀಕ್ಷಕ ಸಿದ್ದಪ್ಪ ಉಪಸ್ಥಿತರಿದ್ದರು.