ಕೀಟಜನ್ಯ ರೋಗ ನಿಯಂತ್ರಣಕ್ಕೆ ಸಹಕರಿಸಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.೧೩; ಮನೆ ಮನೆ ಲಾರ್ವಾ ಸಮೀಕ್ಷೆಗೆ ಬರುವ ಆರೋಗ್ಯ ಇಲಾಖಾ ಸಿಬ್ಬಂದಿಗೆ ಸಹಕರಿಸಿ ಕೀಟಜನ್ಯ ರೋಗ ನಿಯಂತ್ರಿಸಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.ಚಿತ್ರದುರ್ಗ ನಗರದ ಎಲ್ಲಾ 35 ವಾರ್ಡ್‍ಗಳಲ್ಲಿ ಕೀಟಜನ್ಯ ರೋಗಗಳ ನಿಯಂತ್ರಣಕ್ಕಾಗಿ ಮನೆ ಮನೆ ಭೇಟಿ ವಿಶೇಷ ಲಾರ್ವಾ ಮತ್ತು ಜ್ವರ ಸಮೀಕ್ಷೆ ಕಾರ್ಯಕ್ರಮವನ್ನು ಮಾ.12 ಮತ್ತು 13ರಂದು ಹಮ್ಮಿಕೊಂಡಿದ್ದು, ನಗರದ ವಾರ್ಡ್ ಸಂಖ್ಯೆ 2ರ ಮಹಾರಾಣಿ ಕಾಲೇಜು ಹಿಂಭಾಗದ ಕಾಳಮ್ಮನ ದೇವಸ್ಥಾನದ ಸುತ್ತಮುತ್ತ ನಡೆಯುತ್ತಿದ್ದ ಸಮೀಕ್ಷೆ ಬೆಂಬಲಿತ ಮೇಲ್ವಿಚಾರಣೆ ಹಾಗೂ ಗುಂಪು ಸಭೆ ನಡೆಸಿ ಮಾಹಿತಿ ಶಿಕ್ಷಣ ನೀಡಿದರು.ಚಿತ್ರದುರ್ಗ ನಗರದ ಎಲ್ಲಾ ಮನೆಮನೆಗಳ ಭೇಟಿ ಲಾರ್ವಾ ಸಮೀಕ್ಷೆ ಕಾರ್ಯಕ್ರಮ ರಾಷ್ಟ್ರೀಯ ಕೀಟಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ನಡೆಯುತ್ತಿದೆ. ಮನೆ ಮನೆ ಲಾರ್ವಾ ಸಮೀಕ್ಷೆಗೆ ಬರುವ ಆರೋಗ್ಯ ಇಲಾಖಾ ಸಿಬ್ಬಂದಿಗೆ ಸಹಕರಿಸಿ ಕೀಟ ಜನ್ಯ ರೋಗ ನಿಯಂತ್ರಿಸಿ ಎಂದರು.ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಿಂದ ನಗರದ ವಿವಿಧಡೆ ಆರೋಗ್ಯ ಶಿಕ್ಷಣಾಧಿಕಾರಿಗಳ ತಂಡ ಭೇಟಿ ನೀಡಿ ಲಾರ್ವ ಸಮೀಕ್ಷೆ ಪರಿಶೀಲಿಸಿ ಡೆಂಗ್ಯೂ ಪ್ರಕರಣಗಳು ಕಂಡು ಬಂದ ಕೆಳಕೋಟೆ ಮುನ್ಸಿಪಲ್ ಕಾಲೋನಿ, ಮಹಾಲಕ್ಷ್ಮೀ ದೇವಸ್ಥಾನದ ಬಳಿ ಮಾಹಿತಿ ಶಿಕ್ಷಣ ಅಂತರ್ ವೈಯಕ್ತಿಕ ಸಮಾಲೋಚನೆ ನಡೆಸಿ ಪರಿಸರ ಸ್ವಚ್ಛತೆ ಮನೆಯ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿ ಕಾಪಾಡಲು ನೀರಿನ ತೊಟ್ಟಿಗಳನ್ನು ಶುಚಿಗೊಳಿಸಲು ಸೊಳ್ಳೆಗಳಿಂದ ಸ್ವಯಂ ರಕ್ಷಣೆ ಪಡೆಯಲು ಜೈವಿಕ ರಾಸಾಯನಿಕ ಪ್ರಾಕೃತಿಕ ವಿಧಾನಗಳನ್ನು ಅನುಸರಿಸಲು ಮಾರ್ಗದರ್ಶನ ನೀಡಿ ಸೊಳ್ಳೆಗಳ ಸಂತಾನೋತ್ಪತ್ತಿ ಮಾಡುವ ನೀರಿನ ತೊಟ್ಟಿಗಳನ್ನು ತೋರಿಸಿ ಲಾರ್ವ ಹಂತದಲ್ಲಿ ಸೊಳ್ಳೆಗಳನ್ನ ನಾಶ ಮಾಡಲು 𝚊𝚋𝚊𝚝𝚎 ದ್ರಾವಣವನ್ನು ಸಿಂಪಡಿಸಿ ಚರಂಡಿಯಲ್ಲಿ ನಿಂತ ನೀರಿಗೆ ವೇಸ್ಟ್ ಆಯಿಲ್ ಉಪಯೋಗಿಸುವಂತೆ ತಿಳಿಸಿದರು.