ಸಾರ್ವಜನಿಕ ರಸ್ತೆ ತಡೆಗೆ ಅವಕಾಶವಿಲ್ಲ: ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.೧೩; ಕಬ್ಬಿಣದ ಅದಿರು ತುಂಬಿದ ಲಾರಿಗಳು ಚಿತ್ರದುರ್ಗ ತಾಲ್ಲೂಕಿನ ಕಡ್ಡೆಗುದ್ದು ಹಾಗೂ ಸಾಸಲು ಗ್ರಾಮಗಳ ಮುಖಾಂತರ ಸಂಚರಿಸುವಾಗ ಆಗುತ್ತಿರುವ ತೊಂದರೆ ಹಾಗೂ ಕಬ್ಬಿಣದ ಅದಿರು ಸಾಗಾಣಿಕೆ ವಾಹನಗಳನ್ನು ಪದೇ ಪದೇ ತಡೆದು ಪ್ರತಿಭಟನೆ ನಡೆಸುತ್ತಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನಲೆಯಲ್ಲಿ ಕಡ್ಡಾಯವಾಗಿ ಯಾರು ಕೂಡ ಸಾರ್ವಜನಿಕ ರಸ್ತೆ ತಡೆಯುವುದಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಕಬ್ಬಿಣದ ಅದಿರು ಸಾಗಾಣಿಕೆ ಮಾಡುವ ವಾಹನಗಳ ರಹದಾರಿಯ ಕುರಿತು ಗಣಿ ಮಾಲೀಕರು, ಅದಿರು ಸಾಗಾಣಿಕೆದಾರರು ಮತ್ತು ಸ್ಥಳೀಯ ಗ್ರಾಮಸ್ಥರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗಣಿಬಾಧಿತ ಪ್ರದೇಶಗಳ ಸ್ಥಳೀಯ ಗ್ರಾಮಸ್ಥರಿಗೂ ತೊಂದರೆಯಾಗುತ್ತಿರುವುದು ಸಹ ಗಮನಕ್ಕೆ ಬಂದಿದೆ.  ಸ್ಥಳೀಯ ಗ್ರಾಮಸ್ಥರಿಗೆ ದೂಳಿನ ಸಮಸ್ಯೆ, ಕೃಷಿ ಚಟುವಟಿಕೆಗಳಿಗೆ ಆಗುತ್ತಿರುವ ತೊಂದರೆ, ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಂಚಾರ ದಟ್ಟಣೆ ಇತ್ಯಾದಿ ವಿಚಾರಗಳಿಗೆ ಸಂಬಂಧಪಟ್ಟಂತೆ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕಾಗಿ ಲೋಕೋಪಯೋಗಿ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ, ಉಪವಿಭಾಗಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒಳಗೊಂಡಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದರು.ಹೆಚ್ಚಿನ ವಾಹನ ಸಂಚಾರ ದಟ್ಟಣೆಯ ಗಣಿಬಾಧಿತ ಪ್ರದೇಶಗಳ ಗ್ರಾಮಗಳ ರಸ್ತೆಯನ್ನು ಅಪ್‍ಗ್ರೇಡ್ ಮಾಡುವುದು, ರಸ್ತೆ ದುರಸ್ತಿ ಹಾಗೂ ಸ್ಕೈವಾಕ್ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಇದರ ಜೊತೆಗೆ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನವನ್ನು ಸಂಬಂಧಪಟ್ಟ ಗಣಿ ಕಂಪನಿಗಳು ಕಡ್ಡಾಯವಾಗಿ ಮಾಡಬೇಕು. ಉಪ ಸಮಿತಿಯು ಶಿಫಾರಸ್ಸು ಮಾಡುವ ಎಲ್ಲ ಸಲಹೆ-ಸೂಚನೆಗಳಿಗೆ ಗಣಿ ಕಂಪನಿಗಳು ಕಡ್ಡಾಯವಾಗಿ ಬದ್ಧರಿರಬೇಕು. ಉಪ ಸಮಿತಿಯು ಶಿಫಾರಸ್ಸು ಮಾಡುವ ಸಲಹೆ-ಸೂಚನೆಗಳಿಗೆ ಗಣಿ ಕಂಪನಿಗಳು ಅಗತ್ಯ ಸಹಕಾರ ನೀಡದಿದ್ದರೆ ಕಬ್ಬಿಣದ ಅದಿರು ಸಾಗಾಣಿಕೆ ಮಾಡುವ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.ಗಣಿಬಾಧಿತ ಪ್ರದೇಶಗಳ ವ್ಯಾಪ್ತಿಯ ಸ್ಥಳೀಯ ಗ್ರಾಮಸ್ಥರಿಗೆ ಟ್ಯಾಂಕರ್ ಪೂರೈಕೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಸೇರಿದಂತೆ ಸಿಎಸ್‍ಆರ್ ನಿಧಿಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಗಣಿ ಪ್ರದೇಶಗಳ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತೆಗೆ ಕ್ರಮ, ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ರತ್ಯೇಕ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.