ರಾಜಕೀಯವಾಗಿ, ಸಾಮಾಜಿಕವಾಗಿ, ಸಾಹಿತ್ಯಕವಾಗಿ ಮಹಿಳೆಯರು ಎತ್ತರಕ್ಕೆ ಬೆಳೆಯಬೇಕು: ಲಕ್ಷ್ಮೀ ಪಾಟೀಲ್
ಕಲಬುರಗಿ:ಮಾ.13: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಬೇಕು ಎಂದು ಶ್ರೀಮತಿ ಲಕ್ಷ್ಮೀ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಕರೆ ನೀಡಿದರು.
ನಗರದ ಕಮಿತಕರ್ ಕಲ್ಯಾಣ ಮಂಟಪದಲ್ಲಿ ಮಹಿಳಾ ಜ್ಞಾನ ವಿಕಾಸ್ ಕೇಂದ್ರಗಳ ತಾಲ್ಲೂಕು ಮಟ್ಟದ ವಿಚಾರಗೋಷ್ಠಿಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಇನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುವಂತಾಗಬೇಕು. ಮಹಿಳೆಯರ ಸಮಾನತೆ ಜೊತೆಗೆ ಸಮಾಜದಲ್ಲಿ ರಾಜಕೀಯವಾಗಿ ಸಾಮಾಜಿಕವಾಗಿ ಸಾಹಿತಿಕವಾಗಿ ಇನ್ನು ಎತ್ತರಕ್ಕೆ ಬೆಳೆಯಬೇಕು ಎಂದರು.
ಜಿಲ್ಲೆಯ ನಿರ್ದೇಶಕ ಸತೀಶ್ ಸುವರ್ಣ ಅವರು ಕ್ಷೇತ್ರದ ಹಿನ್ನಲೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮಗಳು ಹಾಗೂ ಉದ್ದೇಶಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಅವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜನಪರ ಕೆಲಸಗಳನ್ನು ಮಾಡುತ್ತಿದ್ದು ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕಲು ಅನುಕೂಲವಾಗಿದೆ ಎಂದು ಹೇಳಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸಿ.ಎನ್. ಬಾಬಳಗಾಂವ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಚಾರಗೋಷ್ಠಿಯಲ್ಲಿ ಮಹಿಳೆಯರಿಗೆ ಕಾನೂನಿನ ಅರಿವು ಕುರಿತು ಜಿಲ್ಲಾ ಗ್ರಾಹಕರ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಮಾಲತಿ ರೇಷ್ಮಿ ಅವರು ಮಾತನಾಡಿ, ಮಹಿಳೆಯರಿಗೆ ಕಾನೂನು ಅಗತ್ಯತೆಗಳನ್ನು ಸಮಯ ಸಂದರ್ಭಗಳಲ್ಲಿ ಬರುವ ಸಮಸ್ಯೆಗಳಿಗೆ ಕೆಲವು ಅಗತ್ಯ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಕುಮಾರಿ ಮಾಲಗಣ್ಣಿ, ಶ್ರೀಮತಿ ಸರಸ್ವತಿ ಹೆಬ್ಬಾರ್ ಅವರು ಉಪಸ್ಥಿತರಿದ್ದರು.
ಎರಡನೇ ಗೋಷ್ಠಿ ಕ್ಯಾನ್ಸರ್ ಜಾಗೃತಿಯ ಕುರಿತು ಕಿದ್ವಾಯಿ ಕ್ಯಾನ್ಸರ್ ಸೆಂಟರ್‍ನ ಡಾ. ಶೃತಿ ಅವರು ಮಾತನಾಡಿ, ಮಹಿಳೆಯರಲ್ಲಿ ಸರ್ವೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಮತ್ತು ಗರ್ಭಕೊರಳಿನ ಕ್ಯಾನ್ಸರ್ ಬಗ್ಗೆ ಹಾಗೂ ವ್ಯಾಕ್ಸಿನೇಷನ್ ಬಗ್ಗೆ ಮತ್ತು ಅದನ್ನು ತಡೆಗಟ್ಟುವ ವಿಧಾನದ ಬಗ್ಗೆ ಮಾಹಿತಿ ನೀಡಿದರು. ಡಾ. ಸಂಧ್ಯಾ ಕಾನೇಕರ್ ಅವರು ಆರೋಗ್ಯದ ಬಗ್ಗೆ ಬಾಯಿಯ ಸುಚಿತ್ವದ ಬಗ್ಗೆ ಹಲ್ಲಿನ ಸುರಕ್ಷತೆಯ ಬಗ್ಗೆ ಹಾಗೂ ಬಾಯಿ ಕ್ಯಾನ್ಸರ್ ಬಗ್ಗೆ ತಿಳಿಸಿದರು. ಡಾ. ಜಯಶ್ರೀ ರೆಡ್ಡಿ ಅವರು ವಿಚಾರಗೋಷ್ಠಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ವಿವಿಧ ಸ್ವಉದ್ಯೋಗ ಮಾಡಿದ 15 ಸದಸ್ಯರು ತಿಂಡಿ ತಿನಿಸು, ಬಟ್ಟೆ, ಕರಕುಶಲ ವಸ್ತುಗಳ ಸ್ಟಾಲ್ ಹಾಕಿದರು. 26 ಜನ ಕೇಂದ್ರ ಸದಸ್ಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು. ಧ್ಯಾನದ ಆರತಿ ತಟ್ಟೆ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಅದರಲ್ಲಿ 40 ಸದಸ್ಯರು ಭಾಗವಹಿಸಿದ್ದು, ವಿಜೇತರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಪ್ರಾದೇಶಿಕ ಕಚೇರಿ ಜ್ಞಾನವಿಕಾಸ್ ವಿಭಾಗದ ಯೋಜನಾಧಿಕಾರಿ ಶ್ರೀಮತಿ ಶಕುಂತಲಾ, ತಾಲ್ಲೂಕಿನ ಯೋಜನಾಧಿಕಾರಿ ಪ್ರವೀಣ್ ಆಚಾರ್ಯ, ಅರ್ಚನಾ ಬಸವರಾಜ್ ಬಿರಾಳ್, ಸುರೇಶ್ ತಂಗಾ, ಮಕಾನಗರ ಪಾಲಿಕೆ ಸದಸ್ಯ ಹೈದರಾಲಿ ಇನಾಮ್ದಾರ್, ಶ್ರೀಮತಿ ರಜನಿ ಜಗದೀಶ್, ಸಂತೋಷ್ ಜವಳಿ ಮುಂತಾದವರು ಉಪಸ್ಥಿತರಿದ್ದರು. ತಾಲ್ಲೂಕಿನ ಜ್ಞಾನವಿಕಾಸ್ ಸಮನ್ವಯಧಿಕಾರಿ ಮಮತಾ ಅವರು ಕಾರ್ಯಕ್ರಮ ನಿರೂಪಿಸಿದರು. ಜಗನ್ನಾಥ್ ಸಿಂಧನೂರ್ ಅವರು ವಂದಿಸಿದರು.