ಸಾವಯವ ಕೃಷಿ ಉತ್ತೇಜನ ಕುರಿತ ತರಬೇತಿಗೆ ಚಾಲನೆ
ಕಲಬುರಗಿ:ಮಾ.13:ಕಲಬುರಗಿಯ ಕೋಟನೂರ(ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಮಾರ್ಚ್ 11 ರಂದು ಜಿಲ್ಲೆಯ 50 ಜನ ರೈತರಿಗೆ ಸಾವಯವ ಕೃಷಿ ಉತ್ತೇಜನ ಕುರಿತು ತರಬೇತಿ ಹಮ್ಮಿಕೊಳ್ಳಲಾಯಿತು.
ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲಬುರಗಿ ಕೋಟನೂರ (ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥರು ಹಾಗೂ ಸಹಾಯಕ ಕೃಷಿ ನಿರ್ದೇಶಕ ಅನಿಲ್‍ಕುಮಾರ ರಾಠೋಡ್ ಅವರು, ಸಾವಯವ ಕೃಷಿ ಮಹತ್ವ ಕುರಿತು ರೈತರಿಗೆ ಮಾಹಿತಿ ನೀಡಿದರು.
ಅತಿಥಿ ಉಪನ್ಯಾಸಕರಾದ ಎನ್‍ಆರ್‍ಎಲ್‍ಎಮ್ (ಓಖಐಒ) ಸಂಯೋಜಕ ಅಬ್ದುಲ್ ರಹೀಮ ರೈತರು ಒಗ್ಗಟ್ಟಾಗಿ ಸಾವಯವ ಕೃಷಿಯಲ್ಲಿ ತೋಡಗಬೇಕು. ಅತಿಯಾದ ರಸಾಯನಿಕಗಳ ಉಪಯೋಗದಿಂದ ನೆಲ ಜಲ ಸಂಪತ್ತು ಕಲುಷಿತವಾಗುತ್ತಿದ್ದು, ಸಾವಯವ ಕೃಷಿಯೊಂದೆ ಇದಕ್ಕೆ ಸೂಕ್ತ ಮಾರ್ಗವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಿನಾಥ ಹೆಮಾಡಿ ಕಳೆಗಳ ನಿರ್ವಹಣೆ, ಗೋ ಕೃಪಾಮೃತ, ಜೀವಾಮೃತ, ಬೀಜಾಮೃತ ತಯಾರಿಕೆ ಕುರಿತು ಮಾಹಿತಿ ನೀಡಿದರು. ಇನ್ನೋರ್ವ ಅತಿಥಿ ಉಪನ್ಯಾಸಕರು ಹಾಗೂ ನಿವೃತ್ತ ವಿಜ್ಞಾನಿಗಳಾದ ಡಾ. ರವೀಂದ್ರ ಗುಂಡಪ್ಪಗೋಳ ಅವರು ಸಾವಯವ ಪದ್ದತಿಯಲ್ಲಿ ಬೀಜೋಪಚಾರ ಹಾಗೂ ಜೈವಿಕ ಗೊಬ್ಬರಗಳ ಬಗ್ಗೆ ಮಾಹಿತಿ ನೀಡಿದರು.