ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ನುಡಿದಂತೆ ನಡೆದ ತೃಪ್ತಿ ನಮಗಿದೆ: ಡಿಕೆಶಿ
ಕಲಬುರಗಿ,ಮಾ.13: ಬಿಜೆಪಿಯ ಮೊದಲ ಅವಧಿಯಲ್ಲಿ ಪ್ರತಿ ಜನಧನ್ ಖಾತೆಗೆ ರೂ. 15 ಲಕ್ಷ ಹಣ ಜಮಾ ಮಾಡುವುದಾಗಿ ಹೇಳಿ ಮಾತು ಬದಲಿಸಿದ್ದು ಒಂದೆಡೆಯಾದರೆ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಮಾತು ಕೊಟ್ಟಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ನುಡಿದಂತೆ ನಡೆದಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಇಲ್ಲಿನ ಎನ್.ವಿ.ಮೈದಾನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಸರಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಜನರಿಗೆ ಎರಡು ಕೋಟಿ ಉದ್ಯೋಗ ನೀಡೋದಾಗಿ ಹೇಳಿ ಬಿಜೆಪಿ ಮಾತು ತಪ್ಪಿದೆ. ಮತ್ತೊಂದೆಡೆ, ಕೇವಲ ಒಂಬತ್ತು ತಿಂಗಳಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ 15 ಸಾವಿರ ಜನರಿಗೆ ಸರಕಾರಿ ಉದ್ಯೋಗ ನೀಡಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಹಾಗಾಗಿ, ಕಮಲ ಕೆಸರಿನಲ್ಲಿ ಇರಬೇಕು. ತೆನೆ ಹೊಲದಲ್ಲಿರಬೇಕು ಹಾಗೂ ಜನರಿಗೆ ದಾನ ಮಾಡುವ ಗುಣ ಇರುವವರು ಅಧಿಕಾರದಲ್ಲಿರಬೇಕು ಎಂದು ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಜನರ ನಂಬಿಕೆ ಉಳಿಸಿಕೊಳ್ಳಲು ಚುನಾವಣಾ ಪೂರ್ವದಲ್ಲಿ ನೀಡಿದ್ದ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವುದಾಗಿ ನುಡಿದರು.
ಕೇವಲ ದೇವಸ್ಥಾನ, ಸಿಎಎ, ಆರ್ಟಿಕಲ್ 370 ರದ್ಧತಿಯಂತಹ ಭಾವನಾತ್ಮಕ ವಿಷಯಗಳಲ್ಲಿ ಮಾತ್ರ ಬಿಜೆಪಿ ಆಸಕ್ತಿ ತೋರಿಸುತ್ತದೆ. ಕಾಂಗ್ರೆಸ್ ಹಾಗಲ್ಲ. ರಾಜ್ಯದಲ್ಲಿ ರೂ.1 ಕೋಟಿಗಿಂತಲೂ ಹೆಚ್ಚು ಆದಾಯ ಇರುವ ದೇವಾಲಯಗಳ ಲಾಭಾಂಶದಲ್ಲಿ ಶೇ.10ರಷ್ಟು ಪಡೆದು ಗ್ರಾಮೀಣ ಭಾಗದ ದೇವಾಲಯಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದರೂ ಬಿಜೆಪಿ ಮುಖಂಡರಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ವಿರೋಧ ವ್ಯಕ್ತಪಡಿಸಿದರು. ಇವರಿಗೆಲ್ಲಾ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದರು.
ಧರ್ಮದಲ್ಲಿ ರಾಜಕಾರಣ ತರಬಾರದು. ಅದರ ಬದಲು ರಾಜಕಾರಣದಲ್ಲಿ ಉತ್ತಮ ಧರ್ಮದ ಕೆಲಸ ಮಾಡಬೇಕು ಎಂಬುದು ಕಾಂಗ್ರೆಸ್ ಒತ್ತಾಸೆಯಾಗಿದೆ ಎಂದರು.
ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕುರಿತು ಪ್ರಸ್ತಾಪಿಸಿದ ಅವರು, ಗೃಹಲಕ್ಷ್ಮಿ ಯೋಜನೆ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತಲಾ ರೂ.2000 ನೀಡುವ ಗ್ಯಾರಂಟಿ ಈ ರಾಜ್ಯದಲ್ಲಿ ಜಾರಿಗೆ ಬರಬೇಕಾದರೆ ನಮ್ಮ ನಾಯಕಿ ಪ್ರಿಯಾಂಕಾ ಗಾಂಧಿ ಅವರೇ ಕಾರಣ ಎಂದು ಪ್ರಸ್ತಾಪಿಸಿದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದರು. ಇದಕ್ಕೂ ಮುಂಚೆ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಸ್ವಾಗತಿಸಿದರು. ವೈದ್ಯಕೀಯ ಶಿಕ್ಷಣ, ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್‍ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯಸಿಂಗ್ ಮಾತನಾಡಿದರು.
ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್, ಶಾಸಕರಾದ ಎಂ.ವೈ.ಪಾಟೀಲ್, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಚಂದ್ರಶೇಖರ ಪಾಟೀಲ್ ಹುಮನಾಬಾದ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂಖಾನ್, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಶರಣಕುಮಾರ್ ಮೋದಿ, ಜಿಲ್ಲಾ ಪಂಚಾಯತಿ ಮಾಜಿ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತಿ ಸಿಇಒ ಭವರ್ ಸಿಂಗ್ ಮೀನಾ, ಪಾಲಿಕೆ ಕಮಿಷನರ್ ಭುವನೇಶ್ ದೇವಿದಾಸ್ ಪಾಟೀಲ್, ಶಿಕ್ಷಣ ಇಲಾಖೆಯ ಅಪರ ಆಯುಕ್ತ ಆಕಾಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ವೇದಿಕೆ ಮೇಲೆ ರೊಟ್ಟಿ ಸವಿದ ಖರ್ಗೆ
ವೇದಿಕೆಯ ಮೇಲೆ ಕಲಬುರಗಿ ರೊಟ್ಟಿ ಬ್ರ್ಯಾಂಡ್ ಲೋಕಾರ್ಪಣೆ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಖಡಕ್ ರೊಟ್ಟಿ ಸವಿಯುವ ಮೂಲಕ ಗಮನ ಸೆಳೆದರು.ಒಮ್ಮೆ ಖರ್ಗೆ ರೊಟ್ಟಿ ಮುರಿದು ಬಾಯಿಗಿಟ್ಟುಕೊಳ್ಳುತ್ತಿದ್ದಂತೆ ಡಿಸಿಎಂಡಿ.ಕೆ.ಶಿವಕುಮಾರ್, ಡಾ.ಶರಣಪ್ರಕಾಶ್ ಪಾಟೀಲ್ ಸೇರಿದಂತೆ ವೇದಿಕೆಯ ಮೇಲಿದ್ದ ಎಲ್ಲ ಗಣ್ಯರು ರೊಟ್ಟಿ ಸವಿದು ಗಮನ ಸೆಳೆದರು.