ಸಂವಿಧಾನ ಬದಲಾವಣೆ ಹೇಳಿಕೆಗೆ ಡಿಸಿಎಂ ಡಿಕೆಶಿ ಗರಂಹೆಗಡೆ ವಿರುದ್ಧ ಬೀದಿಗಿಳಿದು ಪ್ರತಿಭಟಿಸಲು ಡಿಕೆಶಿ ಕರೆ
ಕಲಬುರಗಿ,ಮಾ.13: ಸಂವಿಧಾನ ಬದಲಾವಣೆಯ ಮಾತನಾಡಿರುವ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡಲಿದ್ದು, ಕಲಬುರಗಿಯಿಂದಲೇ ಈ ಹೋರಾಟಕ್ಕೆ ಚಾಲನೆ ನೀಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಇಲ್ಲಿನ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಹೆಗಡೆ ಹೇಳಿಕೆಗೆ ಪ್ರಧಾನಿ ಮೋದಿ ವಹಿಸಿರುವ ಮೌನವನ್ನು ನೋಡಿದರೆ ಈ ಮೌನಂ ಸಮ್ಮತಿ ಲಕ್ಷಣಂ ಎನಿಸುತ್ತದೆ ಎಂದು ವ್ಯಾಖ್ಯಾನಿಸಿದರು.
ಒಂದು ವೇಳೆ ಹೆಗಡೆಯಂಥವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಸಸ್ಪೆಂಡ್ ಮಾಡಿರುತ್ತಿದ್ದೆವು ಎಂದು ಡಿಕೆಶಿ ಗುಡುಗಿದರು.
ಬಿಜೆಪಿಯ ಭಾವನೆಗಳನ್ನು ಅನಂತ್ ಕುಮಾರ್ ಹೆಗಡೆ ಮೂಲಕ ಮಾತನಾಡಿಸಲಾಗುತ್ತಿದೆ. ಇದು ಖಂಡನೀಯ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನು ನಾವೆಲ್ಲರೂ ಸೇರಿ ರಕ್ಷಣೆ ಮಾಡಬೇಕಿದೆ. ಈ ಹಿಂದೆ ಪ್ರಧಾನಿ ಅವರು ಏನು ಭಾಷಣ ಮಾಡಿದ್ದಾರೋ ಅದರ ಬಗ್ಗೆ ಕೂಡ ಎಲ್ಲರೂ ಯೋಚನೆ ಮಾಡಬೇಕಿದೆ. ಬಿಜೆಪಿಯವರು ಹೇಳೋದೊಂದು ಮಾಡೋದೊಂದು. ಇದರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಬೇಕು ಎಂದು ಕರೆ ನೀಡಿದರು.
ಗ್ಯಾರಂಟಿಗೆ ಹಣ ಮೀಸಲು:
ಈ ಬಾರಿಯ ಬಜೆಟ್ ನಲ್ಲಿ ಕೂಡ 52 ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳಿಗಾಗಿ ಮೀಸಲಿಟ್ಟಿರುವುದಾಗಿ ಡಿಸಿಎಂ ಡಿಕೆಶಿ ಹೇಳಿದರು.ಇಡೀ ದೇಶದ ಜನ ಗ್ಯಾರಂಟಿ ಮೆಚ್ಚಿದ್ದಾರೆ. ಬಿಜೆಪಿಯವರು ಕೂಡ ಒಪ್ಪಿ ಮೋದಿ ಗ್ಯಾರಂಟಿ ಅಂತ ಮಾರ್ಪಾಡು ಮಾಡಿಕೊಂಡಿದ್ದಾರೆ ಎಂದರು.ಗ್ಯಾರಂಟಿ ಅಲ್ಲದೆ 1.26 ಲಕ್ಷ ಸಾವಿರ ಕೋಟಿ ಹಣ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದೇವೆ. ನಾವು ಚುನಾವಣೆಗಾಗಿ ಗ್ಯಾರಂಟಿ ಕೊಟ್ಟಿಲ್ಲ. ಜನರ ಬದುಕಿಗಾಗಿ ಗ್ಯಾರಂಟಿ ತಂದಿದ್ದೇವೆ ಎಂದು ಸ್ಲಷ್ಟಪಡಿಸಿದರು.
ಡಾ.ಮಂಜುನಾಥ್ ಸ್ಪರ್ಧೆ; ಏನೂ ಭಯವಿಲ್ಲ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಡಾ. ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಯಾವುದೇ ಭಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.ಡಾಕ್ಟರ್ ಮಂಜುನಾಥ್ ಬಗ್ಗೆ, ದೇವೇಗೌಡರ ಬಗ್ಗೆ, ಕುಮಾರಸ್ವಾಮಿ ಬಗ್ಗೆ ಗೌರವ ಇದೆ. ದೇವೇಗೌಡರ ವಿರುದ್ಧವೂ ಚುನಾವಣೆಗೆ ಇಳಿದಿದ್ದೇವೆ. ಕುಮಾರಸ್ವಾಮಿ ವಿರುದ್ಧವೂ ನಿಂತು ಗೆದ್ದಿದ್ದೇವೆ. ದೇವೇಗೌಡರ ವಿರುದ್ಧ ಒಂದು ಹೆಣ್ಣು ಮಗುವನ್ನು ನಿಲ್ಲಿಸಿ ಗೆಲ್ಲಿಸಿದ್ದಿದೆ ಎಂದು ಉಲ್ಲೇಖಿಸಿದರು.
ಬಿಜೆಪಿಯಿಂದ ಡಾ. ಮಂಜುನಾಥ್ ಸ್ಪರ್ಧೆ ಮಾಡೋದರಿಂದ ನಮಗೇನು ಬೇಜಾರಿಲ್ಲ. ಡಿ.ಕೆ. ಸುರೇಶ್ ಕೇವಲ ಪಾರ್ಲಿಮೆಂಟ್ ಮೆಂಬರ್ ಅಷ್ಟೇ ಅಲ್ಲ; ಪಂಚಾಯತ್ ಮೆಂಬರ್ ಆಗಿದ್ದವರು. ಯಾರು ನಿಂತರೂ ನಮಗೆ ಬೇಜಾರಿಲ್ಲ. ಇಂತಹ ಸಾಕಷ್ಟು ಎಲೆಕ್ಷನ್ ಗಳನ್ನು ನೋಡಿದ್ದೇವೆ ಎಂದರು.
ಯಾರೇ ಬಂದರೂ ಸ್ವಾಗತ
ಕಾಂಗ್ರೆಸ್ ಪಕ್ಷಕ್ಕೆ ಬರುವುದಾಗಿ ಬಿಜೆಪಿಯ ಮೂವರು ಹಾಲಿ ಸಂಸದರು ಆಸಕ್ತಿ ತೋರಿದ್ದಾರೆ. ಯಾರೇ ನಮ್ಮ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬಂದರೂ ಅವರನ್ನು ಸ್ವಾಗತಿಸುವುದಾಗಿ ಅವರು ಸ್ಪಷ್ಟಪಡಿಸಿದರು.
ಬಿಜೆಪಿ ಸಂಸದ ಸದಾನಂದ ಗೌಡ ಅವರಿಗೆ ಕಾಂಗ್ರೆಸ್ ಆಹ್ವಾನ ನೀಡಿದ ಕುರಿತು ಪ್ರಸ್ತಾಪಿಸಿದ ಅವರು, ಬಹಳ ಜನ ಕಾಂಗ್ರೆಸ್ ಪಾರ್ಟಿಗೆ ಬರೋದಿಕ್ಕೆ ಸಿದ್ಧವಾಗಿದ್ದಾರೆ. ನಿನ್ನೆ ಮೂವರು ಬಿಜೆಪಿಯಿಂದ ಬಂದಿದ್ದಾರೆ ಎಂದು ವಿವರಿಸಿದರು.ಒಂದಂತು ಸತ್ಯ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ 20 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.