ಕನ್ನಡ ನಾಮಫಲಕ ಅಳವಡಿಸದಿದ್ದರೆ ನಗರಸಭೆಗೆ ಮುತ್ತಿಗೆ : ಜಗದೀಶ ಬಿರಾದಾರ
ಬೀದರ: ಮಾ.13:ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆ ಕುರಿತು ಜಾಗೃತಿ ಮೂಡುತ್ತಿದೆ. ಆದರೆ ಬೀದರ ಜಿಲ್ಲೆಯಲ್ಲಿ ಮಾತ್ರ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಈ ಕುರಿತು ಕಳಕಳಿ ತೋರಿಸುತ್ತಿಲ್ಲ. ಹಾಗಾದರೆ ನಿಮ್ಮ ಮೇಲೆ ಒತ್ತಡ ಏನಾದರೂ ಇದೆಯಾ? ನೀವು ಕನ್ನಡಿಗರಲ್ವಾ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ಜಗದೀಶ ಬಿರಾದಾರ ಪ್ರಶ್ನೆ ಮಾಡಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ನಿಮಗೆ ಭಯ ಇದ್ದರೆ ನಮಗೆ ತಿಳಿಸಿ. ಎಲ್ಲರೂ ಕೂಡಿ ಕನ್ನಡ ನಾಮಫಲಕ ಅಳವಡಿಸುವ ಕಾರ್ಯ ಮಾಡೋಣ. ಸಭೆ ಕರೆದು ಆಯುಕ್ತರಿಗೆ ತಿಳಿಸಲು ಹಿಂದೇಟು ಹಾಕುತ್ತಿರುವುದು ಏಕೆ? ಎಂದು ಹೇಳಿದರಲ್ಲದೆ, ಮಾರ್ಚ್ 25ರ ವರೆಗೆ ಅಂಗಡಿ ಮುಂಗಟ್ಟುಗಳ ಮೇಲೆ ಶೇ. 60 ರಷ್ಟು ಕನ್ನಡ ನಾಮಫಲಕಗಳು ರಾರಾಜಿಸಬೇಕು. ಇಲ್ಲದಿದ್ದರೆ ನಗರಸಭೆಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು. ಅನ್ಯಭಾಷೆಯ ನಾಮಫಲಕ ಪುಡಿಪುಡಿ ಮಾಡಲಾಗುವುದು ಎಂದರು ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದಾದ್ಯಂತ ನಾಡು ನುಡಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕಾರ್ಯ ಮಾಡುತ್ತಿದೆ. ಹೀಗಾಗಿ ನಾಡು ನುಡಿ ವಿಷಯ ಬಂದಾಗ ನಮ್ಮ ಮೇಲೆ ಎಷ್ಟೇ ಕೇಸ್ ಬಿದ್ದರೂ ಹೆದರುವುದಿಲ್ಲ. ದಯವಿಟ್ಟು ಜಿಲ್ಲಾ ಉಸ್ತುವಾರಿ ಸಚಿವರು ಈ ಕಡೆ ಗಮನ ಹರಿಸಬೇಕು. ತಮ್ಮದೇ ಸರ್ಕಾರ ಆದೇಶ ಹೊರಡಿಸಿರುವ ಶೇ. 60 ಪಸೆರ್ಂಟ್ ಕನ್ನಡ ನಾಮಫಲಕ ಅಳವಡಿಕೆಯನ್ನು ತಮ್ಮ ತವರು ಜಿಲ್ಲೆಯಲ್ಲಿ ಜಾರಿಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಬೇಕು. ಒಂದು ವೇಳೆ ಕನ್ನಡ ನಾಮಫಲಕ ಅಳವಡಿಕೆ ಆಗದಿದ್ದರೆ ನಗರಸಭೆಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು. ಪರಭಾಷೆಯ ನಾಮಫಲಕಗಳನ್ನು ಪುಡಿ ಪುಡಿ ಮಾಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಸುದ್ದಿಗೋಷ್ಟಿಯಲ್ಲಿ ಕರವೇ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ, ಪ್ರಮುಖರಾದ ಭರತನಾಗ್ ಕಾಂಬಳೆ, ವಿಶ್ವನಾಥ ಗೌರ್, ಸಚಿನ್ ಜಟಗೊಂಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.