ಕಲಿತ ವಿದ್ಯೆ ಸಮಾಜದ ಹಿತಕ್ಕಾಗಿ ಬಳಸಿ : ಪಟ್ಟದೇವರು
ಔರಾದ್ : ಮಾ.13:ಬದುಕಿನ ಕೊನೆ ಉಸಿರಿರುವವರೆಗೂ ವಿದ್ಯೆಯನ್ನು ಸಂಪಾದಿಸುತ್ತಲೇ ಇರಬೇಕು. ಕಲಿತ ವಿದ್ಯೆಯನ್ನು ಸಮಾಜದ ಹಿತಕ್ಕೆ ಬಳಸಬೇಕು. ಆಗ ಮಾತ್ರ ಬದುಕಿನ ಸಾರ್ಥಕತೆ ದೊರೆಯುತ್ತದೆ ಎಂದು ಬಸವಕಲ್ಯಾಣದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಅಮರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ವಿದ್ಯಾರ್ಥಿ ಬಂಧುತ್ವ ವೇದಿಕೆ, ಸುಭಾಷ್ ಚಂದ್ರ ಬೋಸ್ ಯುವಕ ಸಂಘದಿಂದ ನಡೆದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆ ಕಾರ್ಯಗಾರದಲ್ಲಿ ಸತ್ಕಾರ ಸ್ವೀಕರಿಸಿ ಆರ್ಶೀವಚನ ನೀಡಿದರು.
ವಿದ್ಯಾರ್ಥಿ ಜೀವನ ಕಾಲಹರಣ ಮಾಡುವ ಅವಧಿಯಲ್ಲ. ಅದೊಂದು ಮಹತ್ತರ ಜವಾಬ್ದಾರಿ ನಿರ್ವಹಿಸುವ ಕಾಲ. ವಿದ್ಯಾರ್ಥಿಗಳಿಗೆ ಮನೋನಿಗ್ರಹ ಅಗತ್ಯ. ಶ್ರದ್ಧೆ ಮತ್ತು ಏಕಾಗ್ರತೆಯಿಂದ ಜ್ಞಾನಾರ್ಜನೆ ಮಾಡಬೇಕು ವಿದ್ಯೆ ಎನ್ನುವುದು ಯಾರೂ ಕದಿಯಲಾಗದ ಸಂಪತ್ತು. ಅದನ್ನು ಎಷ್ಟು ಗಳಿಸಿದರೂ ತೆರಿಗೆ ಕಟ್ಟಬೇಕಿಲ್ಲ. ಎಷ್ಟೇ ಖರ್ಚು ಮಾಡಿದರೂ ಖಾಲಿಯಾಗುವುದಿಲ್ಲ ಎಂದು ನುಡಿದರು.
ನಮ್ಮ, ನಮ್ಮ ಕುಟುಂಬ, ನಮ್ಮ ಸಮಾಜ ಮತ್ತು ನಮ್ಮ ದೇಶದ ಭವಿಷ್ಯವನ್ನು ನಿರ್ಧರಿಸುವ ಸಮಯ. ಆದ್ದರಿಂದ ವಿದ್ಯಾರ್ಥಿಗಳು ಹೊಣೆಗಾರಿಕೆಯಿಂದ ವಿದ್ಯೆ ಕಲಿತು ಸಮಾಜಕ್ಕೆ ಉಪಯೋಗಿಯಾಗಿ ಬೆಳೆಯಬೇಕು,
ಹಣ, ಆಸ್ತಿ ಸಂಪತ್ತಿಗಿಂತ ವಿದ್ಯಾ ಸಂಪತ್ತು ಶಾಶ್ವತ, ವಿದ್ಯಾರ್ಥಿಗಳು ಇದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಗುರಿ ಅಥವಾ ಸಾಧನೆಯಲ್ಲಿ ಜಯಶೀಲರಾಗಬಹುದು. ಕಲಿಕೆ ಕೇವಲ ಗಳಿಕೆಗೆ ಮೀಸಲಾಗದೇ ವಿದ್ಯಾರ್ಥಿಗಳ ಜೀವನಕ್ಕೆ ನಾಂದಿಯಾಗಬೇಕು ಎಂದರು.
ವಿದ್ಯಾರ್ಥಿ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ತೋಳಿ ಭರಮಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ವಿದ್ಯಾರ್ಥಿ ಬಂಧುತ್ವ ವೇದಿಕೆಯ ಜಿಲ್ಲಾಧ್ಯಕ್ಷ ರತ್ನದೀಪ ಕಸ್ತೂರೆ, ಪ್ರಮುಖರಾದ ಬಸವರಾಜ ದೇಶಮುಖ, ಬಂಡೆಪ್ಪ ಕಂಟೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಚಂದ್ರಕಾಂತ ಗದ್ದಗಿ, ಪಪಂ ಮಾಜಿ ಅಧ್ಯಕ್ಷ ಸುನಿಲಕುಮಾರ ದೇಶಮುಖ, ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ, ರವೀಂದ್ರ ಮೀಸೆ, ಶರಣಪ್ಪ ಪಾಟೀಲ್ ಸೇರಿದಂತೆ ಸಾವಿರಾರು ಜನ ಪಾಲ್ಗೊಂಡರು. ಶಿಕ್ಷಕ ಮಹಾದೇವ ಚಿಟಗೀರೆ ಸ್ವಾಗತಿಸಿದರು. ಶಿಕ್ಷಕ ಕೃಷ್ಣ ಪಾಟೀಲ್ ನಿರೂಪಿಸಿದರು. ಆನಂದ ರಾಠೋಡ್ ವಂದಿಸಿದರು. ಈ ವೇಳೆ ಡಾ. ಚಿನ್ನಮ್ಮ ಗದ್ದಗಿ ಅವರಿಗೆ ವಿಶೇಷವಾಗಿ ಸತ್ಕರಿಸಲಾಯಿತು.
ಪರೀಕ್ಷೆ ಎಂದರೆ ಆತಂಕ ಬೇಡ ಹಬ್ಬದಂತೆ ಆಚರಿಸಿ
ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂದಾಕ್ಷಣ ಮಕ್ಕಳು ಮತ್ತು ಪೆÇೀಷಕರಲ್ಲಿ ಆತಂಕ ಮನೆ ಮಾಡುವುದು ಸಹಜ. ಆದರೆ ಪರೀಕ್ಷೆಯ ಭಯ ಬಿಟ್ಟು ಹಬ್ಬದಂತೆ ಅದನ್ನು ಸಂಭ್ರಮಿಸಿ ಸಿದ್ಧತೆ ನಡೆಸದರೆ ಉತ್ತಮ ಫಲಿತಾಂಶ ಸಿಗಲಿದೆ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ. ಆರ್.ಕೆ ಚಾರಿ ಹೇಳಿದರು. ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ಪರೀಕ್ಷೆಯ ಬಗ್ಗೆ ಭಯ ಬಿಡಬೇಕು. ಅನೇಕ ವಿದ್ಯಾರ್ಥಿಗಳು ಚನ್ನಾಗಿ ಓದುತ್ತಾರೆ. ಆದರೆ ಭಯದಿಂದ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿ ಹ್ಯಾಪಿಯಾಗಿ ಪರೀಕ್ಷೆ ಬರೆಯಬೇಕು. ಯಾವುದೇ ಒತ್ತಡ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಪಟ್ಟದ್ದೇವರಿಗೆ ಸನ್ಮಾನ
ಹಂಪಿ ಕನ್ನಡ ವಿಶ್ವವಿದ್ಯಾಲಯದ 32ನೇ ನುಡಿಹಬ್ಬ (ಘಟಿಕೋತ್ಸವ)ದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರು ಅವರಿಗೆ ನಾಡೋಜ ಗೌರವ ಪದವಿ ಮಾಡಲಾಯಿತು. ಈ ಹಿನ್ನಲೆಯಲ್ಲಿ ಔರಾದನಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಡಾ. ಬಸವಲಿಂಗ ಪಟ್ಟದ್ದೇವರಿಗೆ ಸನ್ಮಾನಗಳ ಸುರಿಮಳೆ ನಡೆಯಿತು. ಕನ್ನಡಪರ ಸಂಘಟನೆಗಳು, ಉದ್ಯಮಿಗಳು, ಅಧಿಕಾರಿಗಳು, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಮಹಿಳಾ ಕದಳಿ ವೇದಿಕೆ, ಸರಕಾರಿ ನಿವೃತ್ತ ನೌಕರರ ಸಂಘ, ಪಿಡಿಒ ಒಕ್ಕೂಟ, ವಿಶ್ವಕಲ್ಯಾಣ ಚಾರಿಟೇಬಲ್ ಟ್ರಸ್ಟ್, ರಾಷ್ಟ್ರೀಯ ಬಸವದಳ, ಖಾಸಗಿ ಅನುದಾನ ರಹಿತ ಶಾಲಾ ಸಂಘ, ಎನ್.ಪಿ.ಎಸ್ ನೌಕರರ ಸಂಘ, ಕುಂಬಾರ ಸಮಾಜ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಶ್ರೀಗಳಿಗೆ ಸತ್ಕರಿಸಿದರು.