ಕುಡಿಯುವ ನೀರಿನ ಸಮಸ್ಯೆ ನೀಗಲು ತಾಪಂ ಸರ್ವರೀತಿಯಲ್ಲಿಯೂ ಸಿದ್ದ
ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮಾ.13 ಬರಗಾಲಕ್ಕೆ ತುತ್ತಾಗಿರುವ ಕೊಟ್ಟೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ತಾಲೂಕು ಪಂಚಾಯಿತಿ ಆಡಳಿತ ಸರ್ವರೀತಿಯಲ್ಲಿಯೂ ಸಿದ್ದವಾಗಿದೆ ಎಂದು ತಾಪಂ ಇಒ ರವಿಕುಮಾರ್ ಹೇಳಿದರು.
ಪತ್ರಿಕೆಯೊಂದಿಗೆ ಮಂಗಳವಾರ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾತನಾಡಿ, ತಾಲೂಕಿನಲ್ಲಿ ಒಟ್ಟು ೬೧ ಹಳ್ಳಿಗಳಿದ್ದು, ಇವುಗಳಲ್ಲಿ ೩೧ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಗುರುತಿಸಲಾಗಿದೆ ಎಂದರು.
ತಾಲೂಕಿನ ನಿಂಬಳಗೆರೆ, ಉಜ್ಜಿನಿ, ನಾಗರಕಟ್ಟೆ ಈ ಮೂರು ಗ್ರಾಮ ಪಂಚಾಯಿತಿಗಳಲ್ಲಿನ ಆರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ ಎಂದರು.
ಪ್ರತಿ ತಿಂಗಳಿಗೆ ೨೦ ಸಾವಿರ ರೂ. ಲೆಕ್ಕದಲ್ಲಿ ರೈತರ ಆರು ಕೊಳವೆಬಾವಿಗಳನ್ನು ಬಾಡಿಗೆ ಪಡೆದು ಇವುಗಳಿಂದ ಗ್ರಾಮಸ್ಥರಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲು ಡಿಸೆಂಬರ್ ೪, ೨೦೨೩ರಿಂದಲೇ ಸರ್ಕಾರ ಆದೇಶ ನೀಡಿದೆ ಎಂದು ಮಾಹಿತಿ ನೀಡಿದರು.
ಜಲ ಸಂರಕ್ಷಣಾ ಯೋಜನೆಯಲ್ಲಿ ಕೊಳವೆಬಾವಿಗಳ ಅಂತರ್ಜಲವನ್ನು ವೃದ್ದಿಸಿಕೊಳ್ಳಲು ನರೇಗಾ ಯೋಜನೆಯನ್ನು ರೈತರು ಸದುಪಯೋಗ ಪಡಿಸಿಕೊಳ್ಳಬಹುದು ಎಂದರು.
ಕೊಟ್ಟೂರು ತಾಲೂಕಿನಲ್ಲಿ ಯಾವುದೇ ನದಿ, ತೊರೆ ಹರಿಯದಿರುವುದರಿಂದ ರೈತರು ಮತ್ತು ಸಾರ್ವಜನಿಕರು ಆಂತರ್ಜಲವನ್ನೇ ಅವಲಂಭಿಸಬೇಕಾಗಿರುವುದು ಮಿತವಾಗಿ ನೀರನ್ನು ಬಳಕೆ ಮಾಡಬೇಕು ಎಂದರು.
ಗ್ರಾಮಗಳಲ್ಲಿ ವ್ಯರ್ಥವಾಗಿ ನಳಗಳ ಮೂಲಕ ನೀರು ಹರಿಯಲು ಬಿಡಬಾರದು. ವಿನಾಕಾರಣ ನೀರು ನಳಗಳ ಮೂಲಕ ಹರಿಯವುದು ಕಂಡು ಬಂದಲ್ಲಿ ಸಂಬಂಧಿಸಿದ ವ್ಯಕ್ತಿಯ ಮೇಲೆ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.