ನರೇಗಾ ಕಾಮಗಾರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಮತದಾನ ಜಾಗೃತಿ
ಅಫಜಲಪುರ: ಮಾ.13:ದೇಶಕ್ಕೆ ಸುಭದ್ರ ಆಡಳಿತ ನೀಡುವ ವ್ಯಕ್ತಿಯನ್ನು ಆರಿಸುವಲ್ಲಿ ಮತದಾನ ಅತ್ಯಂತ ಮಹತ್ವದ ಕಾರ್ಯವಾಗಿದೆ. ಯಾರ ಪ್ರಭಾವ ಹಾಗೂ ಒತ್ತಡಕ್ಕೆ ಒಳಗಾಗದೇ ಪ್ರತಿಯೊಬ್ಬರು ಮತದಾನ ಮಾಡಿ ಎಂದು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಕೌಲಗಿ ಮನವಿ ಮಾಡಿದರು.
ತಾಲ್ಲೂಕಿನ ಬಿದನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದನೂರ ಕೆರೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಮತದಾನ ಮಾಡಲು ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಬೇಸಿಗೆ ಕಾಲ ಇರುವುದರಿಂದ ಏಪ್ರಿಲ್, ಮೇ, ಜೂನ್ 3 ತಿಂಗಳ ಕಾಲ ನಿರಂತರವಾಗಿ ನರೇಗಾ ಕೆಲಸದಲ್ಲಿ ಕಾರ್ಯನಿರ್ವಹಿಸುವುದರಿಂದ ಬರುವ ಕೂಲಿ ಹಣದಿಂದ ಜೀವನ ಸಾಗಿಸಲು ಅನುಕೂಲವಾಗುತ್ತದೆ. ಈ ದಿಸೆಯಲ್ಲಿ ಎಲ್ಲ ಕೂಲಿಕಾರರು ಸರಿಯಾಗಿ ಕೆಲಸ ನಿರ್ವಹಿಸಿ ಪೂರ್ತಿ ಕೂಲಿ ಹಣ ಪಡೆಯಬೇಕು. ಮತ್ತು ಪ್ರತಿಯೊಬ್ಬರೂ ಮತದಾನ ಮಾಡಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ, ಪಿ.ಡಿ.ಒ ಅಂಬಾರಾಯ ಕಟ್ಟಿಮನಿ, ಮಾಜಿ ಅಧ್ಯಕ್ಷ ಅರುಣ, ತಾಂತ್ರಿಕ ಸಂಯೋಜಕಿ ಮಾಲಾಶ್ರೀ, ತಾಂತ್ರಿಕ ಸಹಾಯಕ ಅರವಿಂದ್ ಮುನೋಳಿ, ಐಇಸಿ ಸಂಯೋಜಕಿ ಶೋಭಾ ಕಣಮಸ್ಕರ್ ಅನೇಕರಿದ್ದರು.