ಬಡದಾಳ ಗ್ರಾಮದಿಂದ ತಾಲೂಕು ಕೇಂದ್ರಕ್ಕೆ ಧರಣಿ ಸತ್ಯಾಗ್ರಹ ಸ್ಥಳಾಂತರ ಎಚ್ಚರಿಕೆ
ಅಫಜಲಪುರ: ಮಾ.13:ತಾಲೂಕಿನ ಬಡದಾಳ ಗ್ರಾಮದ ನಾಲ್ಕು ದಿಕ್ಕುಗಳ ಸಂಪರ್ಕ ರಸ್ತೆಗಳು ಹದಗೆಟ್ಟ ಕಾರಣ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಹೀಗಾಗಿ ಗುಣಮಟ್ಟದ ಸಂಪರ್ಕ ರಸ್ತೆಗಳನ್ನು ನಿರ್ಮಿಸುವಂತೆ ಆಗ್ರಹಿಸಿ ಬಡದಾಳ ನಾಗರಿಕ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ 17ನೇ ದಿನಕ್ಕೆ ಕಾಲಿಟ್ಟಿದೆ.
ಬಡದಾಳ-ಬಳೂರ್ಗಿ ಸಂಪರ್ಕ ರಸ್ತೆ ಕಳೆದ ವರ್ಷ ಅಕ್ಟೋಬರ ತಿಂಗಳ 10ರಂದು ಬಳೂರ್ಗಿ ರಸ್ತೆ ನಿರ್ಮಿಸುವುದಾಗಿ ಹಳೆಯ ರಸ್ತೆ ಅಗೆಯಲಾಗಿದ್ದು ಇದುವರೆಗೂ ಒಂದು ಬೊಗಸೆ ಮುರುಮ್ ಸಹ ಹಾಕಿಲ್ಲ. ಹೀಗಾಗಿ ಹಳೆಯ ರಸ್ತೆಯ ಕಲ್ಲುಗಳು ಮೇಲೆದ್ದು ಯಾವ ವಾಹನಗಳು ಕೂಡ ಸುಗಮವಾಗಿ ಸಂಚರಿಸದಂತಾಗಿದೆ.
ಯಾವುದೇ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ರಸ್ತೆ ಅಗೆದವರು ರಸ್ತೆ ನಿರ್ಮಿಸದೆ ಬಿಟ್ಟಿರುವುದು ಯಾಕೆ? ಗ್ರಾಮಸ್ಥರು ಸಂಪರ್ಕ ರಸ್ತೆಗಳ ನಿರ್ಮಾಣಕ್ಕಾಗಿ ಕಳೆದ 17 ದಿನಗಳಿಂದ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಂಡರೂ ಸಹ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಧರಣಿ ಸ್ಥಳಕ್ಕೆ ಬಂದು ಗ್ರಾಮಸ್ಥರ ಅಹವಾಲು ಕೇಳುವ ಗೋಜಿಗೆ ಹೋಗುತ್ತಿಲ್ಲವೆಂದು ಗ್ರಾಮಸ್ಥರು ಬೇಸರ ಹೊರ ಹಾಕುತ್ತಿದ್ದಾರೆ.
ಅಲ್ಲದೆ ಸಂಪರ್ಕ ರಸ್ತೆಗಳ ಸುಧಾರಣೆಗಾಗಿನ ಹೋರಾಟ ಗ್ರಾಮದಿಂದ ತಾಲೂಕು ಕೇಂದ್ರಕ್ಕೆ ಸ್ಥಳಾಂತರಿಸಿ ಅಫಜಲಪುರ ಪಟ್ಟಣ ಬಂದ್ ಮಾಡಿ ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಗ್ರಾಮಸ್ಥರು ಬಂದಿದ್ದಾರೆ.
ಮಂಗಳವಾರ ಗ್ರಾಮಸ್ಥರ ಸಭೆ ನಡೆಸಿ ದಿನಾಂಕ ನಿಗದಿ ಮಾಡಿಕೊಂಡು ಅಫಜಲಪುರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ನಾಗರಿಕ ಹೋರಾಟ ಸಮಿತಿ ಪ್ರಮುಖರು ತಿಳಿಸಿದ್ದಾರೆ.