ಯುವಕರು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಳ್ಳಲಿ : ಊಡಗಿ
ಸೇಡಂ :ಮಾ.13: ಕಲಬುರಗಿ ಜಿಲ್ಲೆಯಲ್ಲಿಯೇ ಅತ್ಯಂತೆ ಹೆಚ್ಚು ಸಾಹಿತ್ಯ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುವ ತಾಲೂಕು ಯಾವುದಾದರು ಇದ್ದರೆ ಅದು ನಮ್ಮ ಸೇಡಂ. ಇಲ್ಲಿನ ಹಿರಿಯ ಸಾಹಿತಿಗಳ ಮಾರ್ಗದರ್ಶನದಲ್ಲಿ ಯುವಕರು ಓದಿನ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಳ್ಳಲಿ ಎಂದು ತೋಟಗಾರಿಕೆ ಮಹಾಮಂಡಳಿ ಮಾಜಿ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್ ಊಡಗಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಬೆಳಕು ಪ್ರಕಾಶನ ಸೇಡಂ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಕರ್ತರ ಸುದೀರ ಬಿರಾದಾರ ರಚಿಸಿದ ‘ಗೆದ್ದ ಕೀರ್ತಿ’ ಕಥಾ ಸಂಕಲನ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಅವರು ಮಾತನಾಡಿದರು.
ರಾಷ್ಟ್ರಕೂಟರ ಕಾಲದಿಂದ ಸಾಹಿತಿಗಳಿಗೆ, ಕಲಾವಿದರಿಗೆ ರಾಜಾಶ್ರಯ ನೀಡಿದ ನೆಲ ನಮ್ಮದು. ಕನ್ನಡದ ಮೊಟ್ಟ ಮೊದಲ ಕೃತಿ ಕವಿರಾಜ ಮಾರ್ಗ ನೀಡಿದ ಪುಣ್ಯ ಭೂಮಿ. ಇಂತಹ ಈ ನೆಲದಲ್ಲಿ ಅನೇಕ ಜನ ಸಾಹಿತಿಗಳು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಸಾಹಿತ್ಯದಲ್ಲಿ ಯುವ ಪ್ರತಿಭೆಗಳು ಉದಯಿಸುವಂತಾಗಲಿ. ಸಾಹಿತ್ಯದ ಕೆಲಸ ಕಾರ್ಯಗಳಿಗೆ ನಮ್ಮಿಂದಾಗುವ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲು ನಾವು ಸದಾ ಸಿದ್ದರಿದ್ದೇವೆ ಎಂದರು.
ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಮಾತನಾಡಿ, ಕವಿತೆಗಳ ಮೂಲಕ ಸಾಹಿತ್ಯಕ್ಕೆ ಪ್ರವೇಶ ಮಾಡುವವರೇ ಹೆಚ್ಚಾಗಿರುವಾಗ, ಪತ್ರಕರ್ತ ಸುಧೀರ ಕಥಾ ಸಂಕಲನದ ಮೂಲಕ ಸಾಹಿತ್ಯಕ್ಕೆ ಪಾದಾರ್ಪಣೆ ಮಾಡಿರುವುದು ಅಭಿನಂದನಾರ್ಹವಾದ ವಿಷಯ ಎಂದರು.
ಈ ವೇಳೆ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಕೃತಿ ಪರಿಚಯ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಬೆಳಕು ಪ್ರಕಾಶನದ ಅಧ್ಯಕ್ಷ ಜಗನ್ನಾಥ ತರನಳ್ಳಿ, ಲೇಖಕ ಸುಧೀರ ಬಿರಾದಾರ ಮಾತನಾಡಿದರು.
ಕಲಾವಿದ ಮಹೇಶ ಅಲ್ಲೂರ ಪ್ರಾರ್ಥಿಸಿದರು. ಹಿರಿಯ ಪತ್ರಕರ್ತ ನಾಗಯ್ಯಸ್ವಾಮಿ ಬೊಮ್ನಳ್ಳಿ ಸ್ವಾಗತಿಸಿದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶರಣು ಮಹಾಗಾಂವ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅವಿನಾಶ ಬೋರಂಚಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಆಡಕಿ ವಂದಿಸಿದರು.
ಪತ್ರಕರ್ತ ಸುದೀರ ಬಿರಾದಾರ ರಚಿಸಿದ ‘ಗೆದ್ದ ಕೀರ್ತಿ’ ಕಥಾ ಸಂಕಲನದ ಎಲ್ಲ ಕಥೆಗಳು ಓದುಗರನ್ನು ಓದಿಸಿಕೊಂಡು ಹೋಗುತ್ತವೆ. ಸುಂದರವಾದ ಜಗತ್ತು ಕಥೆಯಲ್ಲಿ ಸೃಷ್ಟಿಸುವ ಕಲೆಗಾರಿಗೆ ಬಿರಾದಾರ ಅವರ ಬಳಿ ಇದೆ. ಕಥಾ ರಚನೆಯಲ್ಲಿ ತೆಗೆದುಕೊಂಡ ವಿಷಯಗಳು, ಪಾತ್ರಗಳ ಸಂಭಾಷಣೆ, ಎಲ್ಲವೂ ಅಚ್ಚುಕಟ್ಟಾಗಿ ರೂಪಿಸಲಾಗಿದೆ.
· ಮಹಿಪಾಲರೆಡ್ಡಿ ಮುನ್ನೂರ, ಮಾಜಿ ಜಿಲ್ಲಾಧ್ಯಕ್ಷರು, ಕಸಾಪ.
ಉದಯೋನ್ಮುಖ ಲೇಖಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೆಳಕು ಪ್ರಕಾಶನ ಹುಟ್ಟುಹಾಕಲಾಗಿದೆ. ‘ಗೆದ್ದ ಕೀರ್ತಿ’ ಕಥಾ ಸಂಕಲನ ಪ್ರಕಾಶನ ಅಡಿಯಲ್ಲಿ ಪ್ರಕಟಗೊಂಡಿರುವ ಮೊದಲ ಕೃತಿಯಾಗಿದ್ದು, ಕೃತಿಯ ಲೇಖಕ ಸುಧೀರ ಬಿರಾದಾರ ಅವರದ್ದು ಕೂಡ ಇದು ಚೊಚ್ಚಿಲ ಕೃತಿಯಾಗಿದೆ. ಇನ್ನೂ ಹೆಚ್ಚಿನ ಕೃತಿಗಳು ಬಿರಾದಾರ ಅವರು ಪ್ರಟಕ ಮಾಡಲಿ ಎಂದು ಬೆಳಕು ಪ್ರಕಾಶನ ಹಾರೈಸುತ್ತದೆ.
· ಜಗನ್ನಾಥ ತರನಳ್ಳಿ, ಪ್ರಕಾಶಕರು, ಬೆಳಕು ಪ್ರಕಾಶನ.