ಬಿಲ್ವಾಡ (ಕೆ) ಗ್ರಾಮದಲ್ಲಿ ಜರುಗಿದ ಬಿದನೂರಸಿದ್ದ ದೇವಸ್ಥಾನ ಶಿಖರ ಲೋಕಾರ್ಪಣೆ
ಅಫಜಲಪುರ: ಮಾ.13:ತಾಲೂಕಿನ ಬಿಲ್ವಾಡ್ (ಕೆ) ಗ್ರಾಮದಲ್ಲಿ ಶ್ರೀ ಬಿದನೂರಸಿದ್ದ ದೇವಸ್ಥಾನ ಶಿಖರ ಲೋಕಾರ್ಪಣೆ ಹಾಗೂ ಕಳಸಾರೋಹಣ ಮತ್ತು ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮವು ಸಾವಿರಾರು ಭಕ್ತರ ಜಯ ಘೋಷಗಳ ಮಧ್ಯೆ ಅರ್ಥಪೂರ್ಣವಾಗಿ ಸರಳವಾಗಿ ಸಂಭ್ರಮದಿಂದ ನೆರವೇರಿತು.
ಶ್ರೀ ಬಿದನೂರಸಿದ್ದ ದೇವರ ಪಲ್ಲಕ್ಕಿ ಉತ್ಸವವು ವಿವಿಧ ವಾದ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಈ ವೇಳೆ
ಸುಕ್ಷೇತ್ರ ಗೋಳಸಾರದ ಶ್ರೀ ಅಭಿನವ ಪುಂಡಲಿಂಗ ಮಹಾ ಶಿವಯೋಗಿಗಳಿಂದ ಕಳಸಾರೋಹಣ ಜರುಗಿತು.
ಮಳೇಂದ್ರ ಸಂಸ್ಥಾನ ಹಿರೇಮಠದ ಪೂಜ್ಯ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಧರ್ಮಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ವೇಳೆ ತಾಲೂಕಿನ ವಿವಿಧ ಮಠಗಳ ಮಠಾಧೀಶರು ಸಾನಿಧ್ಯ ವಹಿಸಿದರು. ಕಾರ್ಯಕ್ರಮದಲ್ಲಿ ಸುಪ್ರಸಿದ್ಧ ಭಜನಾ ತಂಡಗಳು ಭಾಗಿಯಾಗಿದ್ದವು. ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸಿದ್ದರು. ದೇವಸ್ಥಾನ ಸಮಿತಿಯ ಸದಸ್ಯರಿಂದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು.