ಆರ್.ಜೆ ಕಾಲೇಜನಲ್ಲಿ 76ನೇ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ
ಕಲಬುರಗಿ:ಸೆ.17:ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ 76ನೇ ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭವನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ನೆರವೇರಿಸಿದ ಪ್ರಾಂಶುಪಾಲ ಡಾ. ಭುರ್ಲಿ ಪ್ರಹ್ಲಾದರು ಮಾತಾಡುತ್ತಾ ಕಲಬುರಗಿ, ರಾಯಚೂರು, ಬೀದರ, ಯಾದಗಿರಿ, ಕೊಪ್ಪಾಳ, ಬಳ್ಳಾರಿ ಜಿಲ್ಲೆಗಳು ಹೈದರಾಬಾದ್ ನಿಜಾಮನ ಆಡಳಿತಕ್ಕೆ ಒಳಪಟ್ಟಿದ್ದವು. ನಂತರ 1948 ಸಪ್ಟೆಂಬರ್ 17 ರಂದು ಹೈದರಾಬಾದ ಸಂಸ್ಥಾನ ಭಾರತದ ಒಕ್ಕೂಟದಲ್ಲಿ ವಿಲಿನವಾಯಿತು. ಈ ಭಾಗದ ಜಿಲ್ಲೆಗಳು ಕರ್ನಾಟಕದ ಭಾಗವಾದವು. ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರಕಾರವು “ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ”ಯೆಂದು ಪುನರ್ ನಾಮಕರಣ ಮಾಡಿದೆ.
ಈ ಭಾಗದ ಅನೇಕ ನಾಯಕರು ಸಮಾಜ ಸುಧಾರಕರು ಹೋರಾಟ ಮಾಡಿ 371ಜೆ ಕಲಂಅನ್ನು ಜಾರಿಗೆ ತರುವಲ್ಲಿ ಸಫಲರಾದರು. ಡಾ. ಭುರ್ಲಿ ಪ್ರಹ್ಲಾದರು ನಮ್ಮ ಕಾಲೇಜು ಪ್ರಾರಂಭದಲ್ಲಿ ಸರದಾರ ವಲ್ಲಭಭಾಯಿ ಪಟೇಲ್ ಹೆಸರಿನಿಂದ ಬೆಳೆಯುತ್ತ ಬಂದ ಕನಸಿನ ಕೂಸು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಇದರ ರೂವಾರಿಯಾಗಿರುವ ಶ್ರೀಯುತ ಶ್ರೀನಿವಾಸರಾವ್ ಹೆಜೀಬ್ ಅವರು ತೋರಿದ ಕಾಳಜಿ, ಉತ್ಸಾಹ ಅವಿಸ್ಮರಣೀಯವಾದುದು. ಅವರ ಮಾರ್ಗದರ್ಶನದಲ್ಲಿ ಇನ್ನುಳಿದ ಸಂಸ್ಥೆಯ ಸದಸ್ಯರು ಇಲ್ಲಿಯವರೆಗೂ ಕಾರ್ಯಮಗ್ನರಾಗಿ ಸಂಸ್ಥೆಯನ್ನು ಬೆಳೆಸುತ್ತಾ ಬಂದಿದ್ದಾರೆ. ಈಗ 371(ಜೆ) ಜಾರಿಗೆ ಬಂದಾಗಿನಿಂದ ಈ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‍ಗಳಾದ ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಉದ್ಯೋಗ ಮುಂತಾದವುಗಳು ಪಡೆಯಲು ಅನುಕೂಲಗಳಾಗಿವೆ ಎಂದು ವಿದ್ಯಾರ್ಥಿಗಳಿಗೆ ವಿಚಾರವನ್ನು ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಕೇದಾರ ದೀಕ್ಷಿತ್, ಮಳೇಂದ್ರ ಹಿರೇಮಠ ಈ ಸಂದರ್ಭದಲ್ಲಿ ಎಲ್ಲಾ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.