ಸೆ. 19 ರಿಂದ 22ರ ವರೆಗೆ ವಾಸು ಆಸ್ಪತ್ರೆಯಲ್ಲಿ ಸೀಳು ತುಟಿಯ ಉಚಿತ ಶಸ್ತ್ರಚಿಕಿತ್ಸೆಸದುಪಯೋಗ ಪಡೆದುಕೊಳ್ಳಲು ಡಾ. ನೀತಾ ರೇಜಂತಲ್ ಕರೆ
ಬೀದರ:ಸೆ.17: ಸೆಪ್ಟೆಂಬರ್ 19 ರಿಂದ 22ರ ವರೆಗೆ ಮೂರು ದಿವಸಗಳ ಕಾಲ ನಗರದ ವಾಸು ಆಸ್ಪತ್ರೆಯಲ್ಲಿ ಸೀಳು ತುಟಿ ಹಾಗೂ ಅಂಗುಳಿನ ಉಚಿತ ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ. ಮೂರು ವರ್ಷದಿಂದ ಅರವತ್ತು ವರ್ಷದವರೆಗಿನವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಾಸು ಆಸ್ಪತ್ರೆಯ ಸಿಇಓ ಡಾ. ನೀತಾ ಸಂತೋಷ ರೇಜಂತಲ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮುತ್ತೂಟ್ ಪಪ್ಪಚನ್ ಗ್ರೂಪ್‍ನ ಮಿಶನ್ ಸ್ಮೈಲ್ ಹಾಗೂ ವಾಸು ಆಸ್ಪತ್ರೆಯ ಸಹಭಾಗಿತ್ವದಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಳೆದ ಬಾರಿ ಒಟ್ಟು 62 ಸೀಳು ತುಟಿಯ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಈ ಬಾರಿಯೂ ಪ್ರತಿದಿನ ಕನಿಷ್ಠ 20 ಶಸ್ತ್ರಚಿಕಿತ್ಸೆ ಮಾಡುವ ಗುರಿ ಹೊಂದಲಾಗಿದೆ. ಜಿಲ್ಲೆಯ ಜನತೆಗೆ ಇದೊಂದು ಉತ್ತಮ ಅವಕಾಶ. ಜೀವನ ಬದಲಾವಣೆಯ ಕ್ಷಣವಾಗಿದೆ. ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಅಲ್ಲದೇ ರೋಗಿಗಳಿಗೆ ವಾಸು ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ, ಪ್ರಯಾಣ ವೆಚ್ಚ, ಲ್ಯಾಬ್ ಪರೀಕ್ಷೆ, ಔಷಧಿಗಳು, ದಿನಕ್ಕೆ ಎರಡು ಬಾರಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಖ್ಯಾತ ಶಸ್ತ್ರಚಿಕಿತ್ಸಕ ಡಾ. ಕಪೀಲ್ ಪಾಟೀಲ ಮಾತನಾಡಿ ಜನ್ಮದಿಂದಲೇ ಈ ರೀತಿಯ ಸೀಳು ತುಟಿಯ ಸಮಸ್ಯೆಗಳು ಸಹಜವಾಗಿ ಜನರಲ್ಲಿ ಕಾಣಿಸಿಕೊಳ್ಳುತ್ತವೆ. ಇದೊಂದು ಶಾಪ ಎಂದುಕೊಳ್ಳದೇ ವರವೆಂದು ಭಾವಿಸಿ, ಜೀವನ ಉಜ್ವಲಗೊಳಿಸಿಕೊಳ್ಳಲು ಸುಅವಕಾಶ ಒದಗಿ ಬಂದಿದೆ. ಆರೋಗ್ಯಯುತ ಸಮಾಜ ನಿರ್ಮಾಣವೇ ನಮ್ಮ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ವಾಸು ಆಸ್ಪತ್ರೆ ಇಂತಹ ಒಂದು ಸೇವೆಗೆ ಕೈಜೋಡಿಸಿದ್ದು ಶ್ಲಾಘನೀಯ ಕಾರ್ಯ ಎಂದರು.
ಮುತ್ತೂಟ್ ಫಿನ್‍ಕಾರ್ಪ್ ವಲಯ ಮುಖ್ಯಸ್ಥರಾದ ಬಿಸ್ವ ಬಿಕಾಶ್ ಮೊಹತೊ ಮಾತನಾಡಿ ಮುತ್ತೂಟ್ ಪಪ್ಪಚನ್ ಗ್ರೂಪ್‍ನ ಸಿಎಸ್‍ಆರ್ ಅಂಗವಾದ ಸ್ಮೈಲ್ ಮಿಶನ್ ವತಿಯಿಂದ ಇದುವರೆಗೆ 47500 ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 2003 ರಿಂದ ಬಾರತದಾದ್ಯಂತ 70 ಸಾವಿರ ವೈದ್ಯಕೀಯ ಮೌಲ್ಯಮಾಪನ ನಡೆಸಲಾಗಿದೆ. ಸ್ಮೈಲ್ ಪ್ಲೀಜ್ ಕಾರ್ಯಕ್ರಮದಡಿ ವಾಸು ಆಸ್ಪತ್ರೆಯಲ್ಲಿ ಸೀಳು ತುಟಿಗಳ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ನಗರದ ಮುತ್ತೂಟ್ ಫಿನ್‍ಕಾರ್ಪ ನಲ್ಲಿ ತಮ್ಮ ಹೆಸರು ನೊಂದಾಯಿಸಿ, ಜನರು ಈ ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಇದೇ ವೇಳೆ ಸುದ್ದಿಗೋಷ್ಟಿಯಲ್ಲಿ ಮುತ್ತೂಟ ಫಿನ್‍ಕಾರ್ಪ್ ಸಹಾಯಕ ವ್ಯವಸ್ಥಾಪಕ ಶಮೀರ್ ಬೊಂಬಿಕ್, ವಿಭಾಗೀಯ ವ್ಯವಸ್ಥಾಪಕ ಮಾಣಿಕರೆಡ್ಡಿ, ಪ್ರಮುಖರಾದ ಬಂಡೆಪ್ಪಾ ಪಾಟೀಲ, ರೋಟರಿ ಕ್ಲಬ್ ಅಧ್ಯಕ್ಷ ಶಿವಕುಮಾರ ಪಾಖಲ್, ಮೊಹಮ್ಮದ್ ಯಾಸೀನ್, ಪ್ರವೀಣ ಪಾಟೀಲ, ಸಂತೋಷ ಬಿಡಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.