ಗ್ಯಾರಂಟಿ ಫಲಾನುಭವಿಗಳ ಸಮಾವೇಶ
ಗದಗ,ಮಾ.13:ಪಂಚ ಗ್ಯಾರಂಟಿ ಯೋಜನೆಗಳ ಮೂಲಕ 1 ಕೋಟಿ 10 ಲಕ್ಷ ಜನರನ್ನು ಬಡತನ ರೇಖೆಯಿಂದ ಮೆಲೇತ್ತುವ ಮೂಲಕ ಕ್ರಾಂತಿಕಾರಕ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಕೆ ಪಾಟೀಲ ಹೇಳಿದರು.
ಮುಂಡರಗಿ ತಾಲೂಕ ಆಡಳಿತದಿಂದ ಡಂಬಳ ತೋಂಟದಾರ್ಯ ಮಠದಲ್ಲಿ ಜರುಗಿದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾವೇಶದಲ್ಲಿ ದೊಡ್ಡ ಮಟ್ಟದಲ್ಲಿ ಮಹಿಳೆಯರು ಸೇರಿದ್ದು ಸಂತಸ ತಂದಿದೆ. ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಶಕ್ತಿ ಬಂದಿದ್ದು. ಮಹಿಳೆಯರಲ್ಲಿ ಮನೆ ನಡೆಸಿಕೊಂಡು ಹೋಗುವ ಆತ್ಮವಿಶ್ವಾಸ ಮೂಡಿದ್ದು ಗ್ಯಾರಂಟಿ ಯೋಜನೆಯಿಂದ ಎಂದರು.
ಗ್ಯಾರಂಟಿ ಯೋಜನೆಯಿಂದ ಸರ್ಕಾರವು ದಿವಾಳಿ ಆಗುತ್ತದೆ ಎಂದು ಹಲವರು ಬೊಬ್ಬೆ ಹೊಡೆದರು. ಲೋಕಸಭಾ ಚುನಾವಣೆ ನಡೆದ ತಕ್ಷಣ ಗ್ಯಾರಂಟಿ ನಿಲ್ಲುತ್ತೆ ಎಂದು ಸುಳ್ಳು ಸುದ್ದಿ ಬಿತ್ತುತ್ತಾರೆ. ಅದಕ್ಕೆ ಗಮನ ನೀಡಬಾರದು. ಹಾಗೂ ಗ್ಯಾರಂಟಿ ಯೋಜನೆಗೆ ಬೇಕಾದ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ ಮೀಸಲಿಟ್ಟಿದ್ದಾರೆ ಎಂದರು.
ರಾಜ್ಯದ ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್.ಪಾಟೀಲ ಅವರು ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ಕಾರ ಈಗಾಗಲೇ ಚುನಾವಣೆಯಲ್ಲಿ ತಮ್ಮೆಲ್ಲರಿಗೂ ನೀಡಿದ ಬರವಸೆಗಳನ್ನು ಈಡೇರಿಸಿ, ತಮ್ಮ ವಿಶ್ವಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರ ಉಳಿಸಿಕೊಂಡಿದೆ. ಇಂದು ಗ್ಯಾರಂಟಿ ಸಮಾವೇಶ ಮೂಲಕ ಯೋಜನೆಗಳು ತಲುಪಿದ ಬಗ್ಗೆ ಖಚಿತ ಮಾಡಿಕೊಂಡು, ಅರ್ಹರಿಗೆ ಯೋಜನೆ ತಲುಪಿಸಲು ಸಮಾವೇಶ ಮಾಡಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ವೈಶಾಲಿ ಎಂ. ಎಲ್ ಅವರು ಮಾತನಾಡಿ ಸರ್ಕಾರದ ಯೋಜನೆಗಳ ಲಾಭ ಅರ್ಹರಿಗೆ ತಲುಪಿಸಿದ್ದೇವೆ. ಯೋಜನೆಗಳಿಂದ ನಿಮ್ಮ ಕುಟುಂಬದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು. ಮಹಿಳೆಯರಿಗಾಗಿ ಪ್ರಮುಖವಾಗಿ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಮಾಡಿದೆ. ಶಕ್ತಿ ಯೋಜನೆಯಲ್ಲಿ 3.78 ಕೋಟಿ ಮಹಿಳೆಯರು ಜಿಲ್ಲೆಯಲ್ಲಿ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆ, ಗೃಹ ಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಉತ್ತಮ ಆರ್ಥಿಕ ಅಭಿವೃದ್ಧಿ ಹೊಂದಲು ಸಹಕಾರಿಯಾಗಿವೆ . ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ. ಅಧ್ಯಕ್ಷೆ ಸುಜಾತ ದೊಡ್ಡಮನಿ, ತಹಶೀಲ್ದಾರ ಧನಂಜಯ ಮಾಲಗಿತ್ತಿ , ಉಪವಿಭಾಗಾಧಿಕಾರಿ ವೆಂಕಟೇಶ ನಾಯ್ಕ, ವಿವಿಧ ಇಲಾಖೆ ಅಧಿಕಾರಿ, ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು, ಸಿಬ್ಬಂದಿಗಳು, ಫಲಾನುಭವಿಗಳು ಹಾಜರಿದ್ದರು.