ಬಿಜೆಪಿಯ ಮೂವರು ಸದಸ್ಯರು ಕಾಂಗ್ರೆಸ್ ಸೇರಲು ಉತ್ಸುಕ: ಡಿಕೆಶಿ
ಬೆಂಗಳೂರು,ಮಾ.೧೩:ಬಿಜೆಪಿಯ ಮೂವರು ಸಂಸದರು ಕಾಂಗ್ರೆಸ್ ಸೇರಲು ಬಯಸಿದ್ದು, ಈ ಮೂರು ಹಾಲಿ ಸಂಸದರು, ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕಲಬುರಗಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಂಪರ್ಕದಲ್ಲಿ ಮೂವರು ಸಂಸದರ ಹೆಸರನ್ನು ಸದ್ಯ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಯಾರೇ ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬಂದರೆ ಅವರನ್ನು ಸ್ವಾಗತಿಸುತ್ತೇವೆ ಎಂದರು.
ಬಿಜೆಪಿಯ ಕೆಲ ಹಾಲಿ ಸಂಸದರು ಕಾಂಗ್ರೆಸ್ ಕದ ತಟ್ಟಿರುವುದು ನಿಜ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬೆಂಗಳೂರು ಉತ್ತರ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಿಜೆಪಿ ಡಿ.ವಿ ಸದಾನಂದಗೌಡ ಅವರು ಕಾಂಗ್ರೆಸ್ ಟಿಕೆಟ್ ಮೇಲೆ ಕಣಕ್ಕಿಳಿಯವ ಬಗ್ಗೆ ಪ್ರತಿಕ್ರಿಯೆ ನೀಡಲಿಲ್ಲ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಬಿಜೆಪಿಯಿಂದ ಕಣಕ್ಕಿಳಿದರೆ ಸ್ವಾಗತ ಎಂದ ಡಿ.ಕೆ ಶಿವಕುಮಾರ್, ನಾವು ಮಾಜಿ ಪ್ರಧಾನಿದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಅವರ ಮನೆಯವರು, ಮಗನ ಸ್ಪರ್ಧೆ,ಅವರ ಪುತ್ರನ ಸ್ಪರ್ಧೆ ಎಲ್ಲವನ್ನೂ ನೋಡಿದ್ದೇವೆ ನಮ್ಮ ಸಂಸದ ಡಿಕೆ ಸುರೇಶ್ ಬರೀ ಸದಸ್ಯನಲ್ಲ ಪಂಚಾಯ್ತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಚುನಾವಣೆ ಎದುರಿಸುವುದು ಗೊತ್ತಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ೨೦ ಸ್ಥಾನಗಳನ್ನು ಗೆಲ್ಲಲಿದೆ ಎಂದು ಡಿ.ಕೆ ಶಿವಕುಮಾರ್ ಭವಿಷ್ಯ ನುಡಿದರು.
ಹೆಗಡೆ ವಿರುದ್ಧ ಹೋರಾಟ
ಸಂವಿಧಾನ ಬದಲಾವಣೆಯ ಮಾತನಾಡಿರುವ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡಲಿದ್ದು, ಕಲಬುರಗಿಯಿಂದಲೇ ಈ ಹೋರಾಟಕ್ಕೆ ಚಾಲನೆ ನೀಡುವುದಾಗಿ ಹೇಳಿದರು.
ಸಂಸದ ಹೆಗಡೆ ಹೇಳಿಕೆಗೆ ಪ್ರಧಾನಿ ಮೋದಿ ವಹಿಸಿರುವ ಮೌನವನ್ನು ನೋಡಿದರೆ ಈ ಮೌನಂ ಸಮ್ಮತಿ ಲಕ್ಷಣಂ ಎನಿಸುತ್ತದೆ ಎಂದು ವ್ಯಾಖ್ಯಾನಿಸಿ,ಒಂದು ವೇಳೆ ಹೆಗಡೆಯಂಥವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಸಸ್ಪೆಂಡ್ ಮಾಡಿರುತ್ತಿದ್ದೆವು ಎಂದು ಡಿಕೆಶಿ ಗುಡುಗಿದರು.
ಬಿಜೆಪಿಯ ಭಾವನೆಗಳನ್ನು ಅನಂತ್ ಕುಮಾರ್ ಹೆಗಡೆ ಮೂಲಕ ಮಾತನಾಡಿಸಲಾಗುತ್ತಿದೆ. ಇದು ಖಂಡನೀಯ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನು ನಾವೆಲ್ಲರೂ ಸೇರಿ ರಕ್ಷಣೆ ಮಾಡಬೇಕಿದೆ. ಈ ಹಿಂದೆ ಪ್ರಧಾನಿ ಅವರು ಏನು ಭಾಷಣ ಮಾಡಿದ್ದಾರೋ ಅದರ ಬಗ್ಗೆ ಕೂಡ ಎಲ್ಲರೂ ಯೋಚನೆ ಮಾಡಬೇಕಿದೆ. ಬಿಜೆಪಿಯವರು ಹೇಳೋದೊಂದು ಮಾಡೋದೊಂದು. ಇದರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಬೇಕು ಎಂದು ಕರೆ ನೀಡಿದರು.
ಗ್ಯಾರಂಟಿಗೆ ಹಣ ಮೀಸಲು:
ಈ ಬಾರಿಯ ಬಜೆಟ್ ನಲ್ಲಿ ಕೂಡ ೫೨ ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳಿಗಾಗಿ ಮೀಸಲಿಟ್ಟಿರುವುದಾಗಿ ಡಿಸಿಎಂ ಡಿಕೆಶಿ ಹೇಳಿದರು.ಇಡೀ ದೇಶದ ಜನ ಗ್ಯಾರಂಟಿ ಮೆಚ್ಚಿದ್ದಾರೆ. ಬಿಜೆಪಿಯವರು ಕೂಡ ಒಪ್ಪಿ ಮೋದಿ ಗ್ಯಾರಂಟಿ ಅಂತ ಮಾರ್ಪಾಡು ಮಾಡಿಕೊಂಡಿದ್ದಾರೆ ಎಂದರು.ಗ್ಯಾರಂಟಿ ಅಲ್ಲದೆ ೧.೨೬ ಲಕ್ಷ ಸಾವಿರ ಕೋಟಿ ಹಣ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದೇವೆ. ನಾವು ಚುನಾವಣೆಗಾಗಿ ಗ್ಯಾರಂಟಿ ಕೊಟ್ಟಿಲ್ಲ. ಜನರ ಬದುಕಿಗಾಗಿ ಗ್ಯಾರಂಟಿ ತಂದಿದ್ದೇವೆ ಎಂದು ಸ್ಲಷ್ಟಪಡಿಸಿದರು.