ನಂಜನಗೂಡು ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ403ನೇ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ಮಹೋತ್ಸವ
ಸಂಜೆವಾಣಿ ವಾರ್ತೆ.
ವಿಜಯಪುರ,ಮಾ.13:ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 403ನೇ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ಮಹೋತ್ಸವವನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು.
ಉತ್ಸವದ ಅಂಗವಾಗಿ ಬೆಳಿಗ್ಗೆ ವೃಂದಾವನದ ನಿರ್ಮಾಲ್ಯ ವಿಸರ್ಜನ, ಬಳಿಕ ಪಂಚಾಮೃತ ಅಭಿಷೇಕ, ಅಷ್ಟೋತ್ತರ ನಡೆದವು. ಭಜನಾ ಮಂಡಳಿ ಸದಸ್ಯೆಯರಿಂದ ಸುಶ್ರಾವ್ಯ ಭಜನೆ ಜರುಗಿತು. ನಂತರ ಮಠದ ಪ್ರಾಂಗಣದಲ್ಲಿ ಪುಷ್ಪಗಳಿಂದ ಅಲಂಕೃತ ಭವ್ಯ ರಥೋತ್ಸವ ನಡೆದು ಭಕ್ತ ವೃಂದದ ಭಕ್ತಿಗೀತೆಗಳ ಗಾಯನ ಶ್ರೀಮಠದ ತುಂಬೆಲ್ಲ ಮಾರ್ದನಿಸಿತು.
ಮುಂಜಾನೆಯಿಂದಲೇ ನಗರದ ವಿವಿಧ ಬಡಾವಣೆಗಳಿಂದ ಭಕ್ತರು ಶ್ರೀಮಠಕ್ಕೆ ಆಗಮಿಸಿ ವೃಂದಾವನದ ದರ್ಶನ ಪಡೆದು ಪುನೀತರಾಗುತ್ತಿದ್ದುದು ಕಂಡು ಬಂದಿತು.
ಐದು ದಿನಗಳ ಕಾಲ ಶ್ರೀಮಠದಲ್ಲಿ ನಡೆಯಲಿರುವ ಜ್ಞಾನಸತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಂತ್ರಾಲಯದ ಪಂಡಿತ ಡಾ. ಅಕ್ಕಿ ರಾಘವೇಂದ್ರಾಚಾರ್ಯ ಅವರು ಗುರುಸಾರ್ವಭೌಮರ ಜೀವನ ಚರಿತ್ರೆ ಕುರಿತು ಉದ್ಭೋದಕ ಪ್ರವಚನ ನೀಡಿ, ” ಮಂತ್ರಾಲಯದ ಕಾಮಧೇನು ಕಲ್ಪವೃಕ್ಷವಾಗಿರುವ ಗುರುಸಾರ್ವಭೌಮರು ಸಕಲ ಜಾತಿ ಮತಗಳ ಭಕ್ತರಿಗೆ ಅಪೇಕ್ಷಿತ ಪ್ರದಾತರು. ಎಲ್ಲ ಯತಿಗಳಿಗೆ ಪಟ್ಟಾಭಿಷೇಕ ಎನ್ನುವುದು ಮರು ಜನ್ಮವಿದ್ದಂತೆ” ಎಂದರು.
“ಸಕಲ ಪಾಪಗಳಿಗೆ ಪರಿಹಾರ ನೀಡುವವರು ಶ್ರೀ ರಾಘವೇಂದ್ರ ಗುರುಸಾರ್ವಭೌಮರು ಮಾತ್ರ. ಜಗದ್ಗುರುಗಳೆಂದು ಕರೆಯಲು ಯೋಗ್ಯರಾದವರು, ಶ್ರೀಮದಾನಂದತೀರ್ಥರು ಮಾತ್ರ. ದಾಸ ಸಾಹಿತ್ಯವನ್ನು ಪ್ರಚುರಗೊಳಿಸಿದವರು ವ್ಯಾಸರಾಜರು” ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮಠದ ವಿಚಾರಣಾಕರ್ತಾ ಗೋಪಾಲ ನಾಯಕ, ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುಧೇಂದ್ರ ಸ್ವಾಮಿಜಿಗಳ ಆದೇಶದಂತೆ ಎಲ್ಲ ಶಾಖಾ ಮಠಗಳಲ್ಲಿ ಮಾ. 12ರಿಂದ 16 ರ ವರೆಗೆ ಐದು ದಿನಗಳ ಕಾಲ ‘ಶ್ರೀ ರಾಘವೇಂದ್ರ ಗುರುವೈಭವೋತ್ಸವ ಎಂದು ಆಚರಿಸಲಾಗುತ್ತಿದೆ. ಅದರಂತೆ ಶ್ರೀಮಠದಲ್ಲಿ ಇಂದಿನಿಂದ ಪ್ರತಿದಿನ ಸಂಜೆ ಪಂಡಿತ ಡಾ. ಅಕ್ಕಿ ರಾಘವೇಂದ್ರಾಚಾರ್ಯ (ಮಂತ್ರಾಲಯ) ಅವರಿಂದ ಪ್ರವಚನ ಮತ್ತು ವಿವಿಧ ಭಜನಾ ಮಂಡಳಿಗಳಿಂದ ಸಂಗೀತ ಸೇವೆ ನಡೆಯಲಿವೆ ಎಂದು ತಿಳಿಸಿದರು.
ಮಠದ ಅರ್ಚಕರಾದ ರವಿ ಆಚಾರ್ಯ ಹಾಗೂ ಶ್ರೀಧರಾಚಾರ್ಯರು ವೃಂದಾವನವನ್ನು ವಿವಿಧ ಬಗೆಯ ಫಲ ಪುಷ್ಪಗಳಿಂದ ಮಠದ ಪ್ರಾಂಗಣವನ್ನು ತಳಿರು ತೋರಣಗಳಲ್ಲದೇ ಬಾಳೆ ದಿಂಡುಗಳಿಂದ ಅಲಂಕರಿಸಿದ್ದು ಭಕ್ತರಲ್ಲಿ ಭಾವುಕತೆ ಮೆರೆಯಿತು.
ಇಂದಿನ ಉತ್ಸವಕ್ಕೆ ಡಾ. ಅರವಿಂದ ಢಾಣಕಶಿರೂರ ಹಾಗೂ ಡಾ. ರಾಮ ನಾಯಕ ಪ್ರಮುಖ ಸೇವಾಕರ್ತರಾಗಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಪಂಡಿತ ಡಾ. ಕೃಷ್ಣಾಚಾರ್ಯ ಕಾಖಂಡಕಿ, ಮಧ್ವೇಶಾಚಾರ್ಯ ಮುತ್ತಗಿ, ವಿ.ಬಿ. ಕುಲಕರ್ಣಿ, ಬಂಡಾಚಾರ್ಯ ಜೋಶಿ, ಶ್ರೀಧರ ಜೋಶಿ(ಮುತ್ತಗಿ), ವಿಜಯೀಂದ್ರ ಜೋಶಿ, ಶ್ರೀಧರ ಹರಿದಾಸ, ಮೈಗೂರ, ಗುರುರಾಜ ಸೊಂಡೂರ, ಕೆ.ಜಿ. ದೇಶಪಾಂಡೆ, ಭೀಮಣ್ಣ ಕುಲಕರ್ಣಿ, ಅರುಣ ತೊರವಿ, ಸಂತೋóಷ ಕುಲಕರ್ಣಿ ಮುಂತಾದವರು ಭಾಗವಹಿಸಿದ್ದರು.