ವಂದೇ ಭಾರತ್ ರೈಲು: ಎಂಪಿ ಗೆ ದ.ಕ.ಸಂಘ ಅಭಿನಂದನೆ
ಕಲಬುರಗಿ:ಮಾ.12: ಬಹು ದಿನಗಳ ಬೇಡಿಕೆ ಕಲಬುರ್ಗಿ ಬೆಂಗಳೂರು ನಡುವೆ ಒಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಗಾಡಿ ಆರಂಭಿಸಿ ಈ ಭಾಗದ ಬೇಡಿಕೆಯನ್ನು ಈಡೇರಿಸಿದೆ ಲೋಕಸಭಾ ಸದಸ್ಯರಾದ ಡಾ. ಜಾಧವ್ ಅವರಿಗೆ ಕಲ್ಬುರ್ಗಿಯ ದಕ್ಷಿಣ ಕನ್ನಡ ಸಂಘ ಅಭಿನಂದನೆ ಸಲ್ಲಿಸಿದೆ.
ಕಲ್ಬುರ್ಗಿಯಿಂದ ಬೆಂಗಳೂರಿಗೆ ಪ್ರತ್ಯೇಕವಾಗಿ ಯಾವುದೇ ರೈಲು ಗಾಡಿ ಇಲ್ಲದೆ ಈ ಭಾಗದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಆಗುತ್ತಿತ್ತು ಶೋಲಾಪುರ – ಹಾಸನ , ಬಸವ ಎಕ್ಸ್ ಪ್ರೆಸ್ ಹಾಗೂ ಉದ್ಯಾನ ಎಕ್ಸ್ ಪ್ರೆಸ್ ಅವಲಂಬಿತ ರಾದವರಿಗೆ ಈಗ ಕಲಬುರ್ಗಿಯಿಂದಲೆ ಪ್ರತ್ಯೇಕ ರೈಲು ಸಂಚಾರ ಪ್ರಾರಂಭವಾಗಿರುವುದರಿಂದ ವರದಾನವಾಗಿದೆ ಎಂದು ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲ್ಬುರ್ಗಿಯಿಂದ ಬೆಂಗಳೂರಿಗೆ ಸಂಚಾರ ಪ್ರಾರಂಭಿಸಿರುವ 01111 ಸಾಪ್ತಾಹಿಕ ರೈಲನ್ನು ಏಪ್ರಿಲ್ ತಿಂಗಳಿನಿಂದ ನಿತ್ಯ ಓಡಿಸುವಂತೆ ಪ್ರಯತ್ನಿಸಬೇಕು. ಶೀಘ್ರದಲ್ಲೇ ವಂದೇ ಭಾರತ್ ಮತ್ತು ಸಾ ಪ್ತಾಹಿಕ ರೈಲು ಬೆಂಗಳೂರು ಕಂಟೋನ್ಮೆಂಟ್ ಅಥವಾ ಯಶವಂತಪುರ ನಿಲ್ದಾಣಕ್ಕೆ ತೆರಳುವಂತೆ ವ್ಯವಸ್ಥೆ ಮಾಡಬೇಕಾಗಿ ಒತ್ತಾಯಿಸಿದ್ದಾರೆ. ಬಹುದಿನಗಳ ಬೇಡಿಕೆಯನ್ನು ಈಡೇರಿಸಿ ಈ ಭಾಗದ ಅಭಿವೃದ್ಧಿಗೆ ನೆರವಾದ ಸಂಸದ ಡಾ. ಉಮೇಶ್ ಜಾಧವ್ ಅವರಿಗೆ ಸಂಘದ ಎಲ್ಲ ಸದಸ್ಯರ ಪರವಾಗಿ ಹಾರ್ದಿಕ ಅಭಿನಂದನೆಗಳು ಎಂದು ಡಾ.ಪೆರ್ಲ ತಿಳಿಸಿದ್ದಾರೆ.
ವಿಮಾನ ಸೇವೆಗೆ ಒತ್ತಾಯ:ಕಲ್ಬುರ್ಗಿಯ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ಹಿಡಿಯುವ ವ್ಯವಸ್ಥೆ ಪ್ರಾರಂಭವಾಗಿರುವುದರಿಂದ ಶೀಘ್ರದಲ್ಲಿ ಬೆಂಗಳೂರು ಮಾರ್ಗವಾಗಿ ಒನ್ ಸ್ಟಾಪ್ ಮಂಗಳೂರು ವಿಮಾನ ಸೇವೆ ಪ್ರಾರಂಭಿಸಲು ಸಂಘ ಈಗಾಗಲೇ ಮನವಿ ಮಾಡಿಕೊಂಡಿದ್ದು ಕೂಡಲೇ ಅನುಷ್ಠಾನಕ್ಕೆ ತರಲು ಒತ್ತಾಯಿಸಿದ್ದಾರೆ. ಖಾಸಗಿ ವಿಮಾನ ಸಂಸ್ಥೆಗಳ ಜೊತೆ ಕೂಡಲೇ ಚರ್ಚಿಸಿ ಇನ್ನಷ್ಟು ವಿಮಾನಗಳು ಸಂಚಾರ ಪ್ರಾರಂಭಿಸಿ ಈ ಭಾಗದ ಅಭಿವೃದ್ಧಿಗೆ ಮತ್ತಷ್ಟು ಅದು ಉತ್ತೇಜನವಾಗಲಿದೆ ಎಂದು ಡಾ.ಪೆರ್ಲ ತಿಳಿಸಿದ್ದಾರೆ.