ಅರ್ಧಕ್ಕೆ ನಿಂತ ಹೊಸಹೊಳಲು ಮೇಲ್ಗಾಲುವೆ ಯೋಜನೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.13:- ತಾಲೂಕಿನ ಬೂಕನಕೆರೆ ಹೋಬಳಿಯ 24 ಗ್ರಾಮಗಳ 3960 ಎಕರೆ ಭೂ ಪ್ರದೇಶಕ್ಕೆ ನೀರುಣಿಸುವ ಹೊಸಹೊಳಲು ಕೆರೆಕೋಡಿ ಮೇಲ್ಮಟ್ಟದ ನಾಲಾ ಯೋಜನೆ 25 ವರ್ಷ ಕಳೆದರೂ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದ್ದು ರೈತರು ನೀರಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಲೇ ಇದ್ದಾರೆ.
ಕೆ.ಆರ್.ಪೇಟೆ ಪಟ್ಟಣ ವ್ಯಾಪ್ತಿಗೆ ಒಳಪಡುವ ಹೊಸಹೊಳಲು ದೊಡ್ಡಕೆರೆ ಸುಮಾರು 2.30 ಕಿ.ಮಿ ಉದ್ದದ ಏರಿಯನ್ನು ಹೊಂದಿದ್ದು ಕೆರೆಯ ಏರಿಯ ಎರಡೂ ಕಡೆ ನಾಲೆಯಿದ್ದು ಸುಮಾರು 550 ಎಕರೆ ಅಚ್ಚುಕಟ್ಟು ಪ್ರದೇಶವಿದೆ. ಕೆರೆಯ ಎಡ ಮತ್ತು ಬಲಭಾಗದಲ್ಲಿ ಕ್ರಮವಾಗಿ 84 ಮೀಟರ್ ಮತ್ತು 71 ಮೀಟರ್ ಉದ್ದದ ಕೋಡಿಯಿದ್ದು ಹೆಚ್ಚುವರಿ ನೀರು ಕೋಡಿಯ ಮೂಲಕ ಹೇಮಾವತಿ ನದಿ ಸೇರುತ್ತದೆ. ಕೆರೆಯ ಮೇಲ್ಬಾಗದ ನಾರಾಯಣದುರ್ಗ ಕಣಿವೆಯಿಂದ ಹರಿದು ಬರುವ ಹಳ್ಳದ ನೀರು ಮತ್ತು ಹೇಮಾವತಿ ಜಲಾಶಯ ಯೋಜನೆಯ ಸಾಹುಕಾರ್ ಚನ್ನಯ್ಯ ನಾಲೆಯ 55,56, 56(ಎ), 57,58, 59, 60, 61 ಮತ್ತು 62 ನೇ ವಿತರಣಾ ನಾಲೆಗಳಿಂದ ಹರಿದು ಬರುವ ಬಸಿ ನೀರು ಈ ಕರೆಗೆ ಹರಿದು ಬರುತ್ತದೆ. ನೀರಾವರಿ ಇಲಾಖೆಯ ಅಂದಾಜಿನ ಪ್ರಕಾರ 150 ರಿಂದ 175 ಕ್ಯೂಸೆಕ್ಸ್ ನೀರು ಬಳಕೆಯಾಗದೆ ಈ ಕರೆ ಕೋಡಿಯ ಮೂಲಕ ಹೇಮಾವತಿ ನದಿಯನ್ನು ಸೇರುತ್ತದೆ.
ವ್ಯರ್ಥವಾಗಿ ಹರಿದು ಹೋಗುವ ಕೆರೆಯ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಸದುದ್ದೇಶದಿಂದ ಅಂದಿನ ನೀರಾವರಿ ಸಚಿವರ ಟಿಪ್ಪಣಿ ಸಂಖ್ಯೆ 923/31.10.1996 ರ ಮೇರೆಗೆ ಹೊಸಹೊಳಲು ಕೆರೆ ಕೋಡಿಯ ಮೇಲ್ಮಟ್ಟದ ನಾಲಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಯಿತು. ಸುಮಾರು 17.25 ಕಿ.ಮಿ ಉದ್ದದ ಈ ನಾಲೆಯ ಮೂಲಕ ಬೂಕನಕೆರೆ ಹೊಬಳಿಯಲ್ಲಿ ಹಾದು ಹೋಗಿರುವ ಹೇಮಾವತಿ ಎಡದಂಡೆ ನಾಲೆಯ ವಿತರಣಾ ನಾಲೆ 62 ಮತ್ತು 64 ರ ಕೊನೆಯ ಹಂತದಲ್ಲಿ ನೀರಾವರಿ ವಂಚಿತರಾಗಿರುವ ಸಫರಿಂಗ್ ಅಚ್ಚುಕಟ್ಟು ಪ್ರದೇಶದ 3960 ಎಕರೆ ಭೂಮಿಗೆ ನೀರುಣಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. 1996 ರಲ್ಲಿ ಶಾಸಕರಾಗಿದ್ದ ಬಿ.ಪ್ರಕಾಶ್ ಅವರ ಒತ್ತಾಸೆಯಿಂದ ಈ ಯೋಜನೆ ರಾಜ್ಯ ಸರ್ಕಾರದಿಂದ ಅನುಮೋದನೆಗೊಂಡಿತು. ನಂತರ 1999 ರಲ್ಲಿ ಶಾಸಕರಾಗಿ ಆಯ್ಕೆಗೊಂಡ ಕೆ.ಬಿ.ಚಂದ್ರಶೇಖರ್ ವಿಶೇಷ ಆಸಕ್ತಿಯಿಂದ ಈ ಹೊಸಹೊಳಲು ಮೇಲ್ಗಾಲುವೆಗೆ 8.25 ಕೋಟಿ ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿ ಆರಂಭಿಸಲಾಯಿತು. ಈ ನಾಲೆ ಪೂರ್ಣಗೊಂಡಿದ್ದರೆ ಬೂಕನಕೆರೆ ಹೋಬಳಿಯ ಚೌಡೇನಹಳ್ಳಿ, ನಾರ್ಗೋನಹಳ್ಳಿ, ಬಳ್ಳೇಕೆರೆ, ಕಾಪನಹಳ್ಳಿ, ಹಳಿಯೂರು, ನಾಟನಹಳ್ಳಿ, ವಿಠಲಾಪುರ, ಹೆಮ್ಮಡಹಳ್ಳಿ, ಕೀಳನಕೊಪ್ಪಲು, ಬಿ.ಬಾಚಹಳ್ಳಿ, ಸಂಕನಹಳ್ಳಿ, ವಿಜಯಹೊಸೂರು, ಅರಳಕುಪ್ಪೆ, ಶೆಟ್ಟಹಳ್ಳಿ, ಚಿಕ್ಕಗಾಡಿಗನಹಳ್ಳಿ, ಯಗಚಕುಪ್ಪೆ, ಕಟ್ಟಹಳ್ಳಿ, ಕುರುಬಹಳ್ಳಿ, ಗಂಜಿಗೆರೆ, ಬೂಕಹಳ್ಳಿ, ರಾಜೇನಹಳ್ಳಿ, ಪೂವನಹಳ್ಳಿ, ಮುದುಗೆರೆ ಮತ್ತು ವರಹನಾಥ ಕಲ್ಲಹಳ್ಳಿ ಪ್ರದೇಶಕ್ಕೆ ಸೇರಿದ ಭೂಮಿ ಶಾಶ್ವತ ನೀರು ಕಾಣುತಿತ್ತು.
ಇದುವರೆಗೆ ಈ ನಾಲಾ ಕಾಮಗಾರಿಗೆ ನೀರಾವರಿ ಇಲಾಖೆ ಸುಮಾರು 10ಕೋಟಿಗೂ ಅಧಿಕ ರೂ ವೆಚ್ಚ ಮಾಡಿದೆ. ಆದರೆ ಕಾಲುವೆ ತೋಡುವ ಕಾರ್ಯ ಪುರ್ಣಗೊಂಡಿಲ್ಲ. ತಾಲೂಕಿನ ವಿಜಯಹೊಸಳ್ಳಿ ಬಳಿ ಕಿರು ಹಳ್ಳವೊಂದು ಹರಿಯುತ್ತಿದೆ. ಈ ಹಳ್ಳದ ಮೇಲೆ ಸುಮಾರು 0.650 ಕಿ.ಮಿ ಉದ್ದ ಮೇಲ್ಗಾಲುವೆ ನಿರ್ಮಿಸಿ ಮುಂದಕ್ಕೆ ನಾಲೆ ಸಾಗಬೇಕು. ಮೇಲ್ಗಾಲುವೆ ನಿರ್ಮಿಸಲು ಅಗತ್ಯ ಮಟ್ಟಕ್ಕೆ ಮಣ್ಣಿನ ಏರಿ ನಿರ್ಮಿಸಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಈ ಹಿಂದೆ 06 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಮಣ್ಣಿನ ಏರಿ ನಿರ್ಮಾಣದ ಹಣ ದುರ್ಬಳಕೆಯಾಗಿದೆ. ಬಂದ ಅನುದಾನವನ್ನು ಮಣ್ಣಿನ ಏರಿಯ ನಿರ್ಮಾಣ ಮತ್ತು ಅರ್ಧಕ್ಕೆ ನಿಂತಿರುವ ನಾಲಾ ತೋಡುವಿಕೆಯ ಕಾಮಗಾರಿಗೆ ಬಳಕೆ ಮಾಡುವ ಬದಲು ನೀರಾವರಿ ಇಲಾಖೆಯ ಈ ಹಿಂದಿನ ಎಂಜಿನಿಯರುಗಳು ವಿಜಯ ಹೊಸಹಳ್ಳಿಯ ವರೆಗೆ 0 ಕಿ.ಮಿ ಯಿಂದ 11 ಕಿ.ಮೀ ವರೆಗೆ ಲೈನಿಂಗ್ ಮಾಡಲು ಬಳಕೆ ಮಾಡಿದ್ದಾರೆ. ನೀರು ಹರಿಯದ ನಿರುಪಯುಕ್ತವಾದ ಅಪೂರ್ಣ ನಾಲೆಯ ಲೈನಿಂಗ್ ಕಾಮಗಾರಿಯ ಬಗ್ಗೆ ಅಂದಿನ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಸ್ವಲ್ಪ ಗಮನ ಹರಿಸಿದ್ದರೆ ನಾಲಾ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು.