ಕೊಬ್ಬರಿ ಖರೀದಿ ತಾರತಮ್ಯದ ವಿರುದ್ಧ ಧರಣಿ ಸತ್ಯಾಗ್ರಹ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.13: ಕೊಬ್ಬರಿ ಖರೀದಿ ಪ್ರಮಾಣ ನಿಗಧಿಯಲ್ಲಿ ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಗೆ ತಾರತಮ್ಯ ನೀತಿ ಅನುಸರಿಸಿದೆ ಎಂದು ಆರೋಪಿಸಿ ತಾಲೂಕು ಕೊಬ್ಬರಿ ಬೆಳೆಗಾರರು ಪಟ್ಟಣದ ತಾಲೂಕು ಆಡಳಿತಸೌಧದ ಮುಂದೆ ಆರಂಭಿಸಿರುವ ಅನಿರ್ಧಿಷ್ಟ ಕಾಲದ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಕೊಬ್ಬರಿ ಖರೀದಿಯಲ್ಲಿ ಮಂಡ್ಯ ಜಿಲ್ಲೆಗೆ ನಿಗಧಿ ಪಡಿಸಿರುವ ಪ್ರಮಾಣ ಅವೈಜ್ಞಾನಿಕವಾಗಿದೆ. ಇದರಿಂದ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಕೊಬ್ಬರಿ ಉತ್ಪಾದಿಸಿಸುವ ಕೆ.ಆರ್.ಪೇಟೆ ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರದ ಅವೈಜ್ಞಾನಿಕ ನೀತಿಯ ವಿರುದ್ದ ತಾಲೂಕು ಕೊಬ್ಬರಿ ಬೆಳೆಗಾರ ರೈತರು ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿರುವ ಖರೀದಿ ಕೇಂದ್ರದ ಮುಂದೆ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ರೈತರ ಸಮಸ್ಯೆಗಳನ್ನು ಮನವರಿಕೆ ಮಾಡಿದ್ದರೂ ರಾಜ್ಯ ಸರ್ಕಾರ ತಾರತಮ್ಯ ನೀತಿಯನ್ನು ಸರಿಪಡಿಸಲು ಮುಂದಾಗಿಲ್ಲ. ಜಿಲ್ಲೆಗೆ ನಿಗಧಿ ಪಡಿಸಿದ್ದ ಪ್ರಮಾಣದಷ್ಟು ಕೊಬ್ಬರಿ ಖರೀದಿಸಲಾಗಿದೆ ಎಂದು ಹೇಳಿ ರಾಜ್ಯ ಸಹಕಾರ ಮಾರಾಟ ಮಂಡಲಿ ಕೊಬ್ಬರಿ ಖರೀದಿಯನ್ನು ನಿಲ್ಲಿಸಿದೆ. ಜಿಲ್ಲೆಗೆ ನಿಗಧಿಪಡಿಸಿರುವ ಕೊಬ್ಬರಿ ಖರೀದಿ ಪ್ರಮಾಣವನ್ನು ಹೆಚ್ಚಿಸಬೇಕು. ಸ್ಥಗಿತಗೊಳಿಸಿರುವ ಕೊಬ್ಬರಿ ಖರೀದಿಯನ್ನು ಮರು ಆರಂಭಿಸುವಂತೆ ಒತ್ತಾಯಿಸಿ ತಾಲೂಕಿನ ಕೊಬ್ಬರಿ ಬೆಳೆಗಾರರು ತಾಲೂಕು ಆಡಳಿತ ಸೌಧದ ಮುಂದೆ ಆರಂಭಿಸಿರುವ ಪ್ರತಿಭಟನೆಯನ್ನು ಮುಂದುವರಿಸಿದ್ದು ಬೇಡಿಕೆ ಈಡೇರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ರಾಜ್ಯ ರೈತಸಂಘದ ನಾಯಕ ಕೆ.ಆರ್.ಜಯರಾಂ ರಾಜ್ಯ ಸರ್ಕಾರ 2022-23 ನೇ ಸಾಲಿನಲ್ಲಿ ಮಂಡ್ಯ ಜಿಲ್ಲೆಯಿಂದ 87 ಸಾವಿರ ಕ್ವಿಂಟಾಲ್ ಕೊಬ್ಬರಿ ಖರೀದಿಸಿತ್ತು. ಪ್ರಸಕ್ತ ಸಾಲಿನಲ್ಲಿ ಕೇವಲ 40 ಸಾವಿರ ಕ್ವಿಂಟಾಲ್ ಕೊಬ್ಬರಿ ಖರೀದಿಗೆ ಮುಂದಾಗಿದ್ದು ಅನಂತರ ಈ ಪ್ರಮಾಣವನ್ನು 50 ಸಾವಿರ ಕ್ವಿಂಟಾಲಿಗೆ ಹೆಚ್ಚಿಸಿದೆ. ರಾಜ್ಯದಲ್ಲಿ ಕೊಬ್ಬರಿ ಧಾರಣೆಯ ಕುಸಿತದಿಂದಾಗಿ ರೈತರಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬರಿ ದಾಸ್ತಾನಿದೆ. ತಾಲೂಕಿನಲ್ಲಿ ಕೆ.ಆರ್.ಪೇಟೆ ಮತ್ತು ಕಿಕ್ಕೇರಿ ಎ.ಪಿ.ಎಂ.ಸಿ ಆವರಣದಲ್ಲಿ ಮಾತ್ರ ಖರೀದಿ ಕೇಂದ್ರ ತೆರೆಯಲಾಗಿದೆ. ತಾಲೂಕಿನ ಎಲ್ಲಾ ಹೋಬಳಿಗಳಲ್ಲೂ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಮತ್ತು ಜಿಲ್ಲೆಯಿಂದ ಕನಿಷ್ಠ 01 ಲಕ್ಷ ಕ್ವಿಂಟಾಲ್ ಖರೀದಿ ಮಾಡಬೇಕು. ಈ ಕುರಿತು ತಾಲೂಕು ಕೊಬ್ಬರಿ ಬೆಳೆಗಾರರು ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದಾರೆ. ಕೊಬ್ಬರಿ ಬೆಳೆಗಾರ ರೈತರ ಸಮಸ್ಯೆಗೆ ಜಿಲ್ಲಾಡಳಿತ ಇದುವರೆಗೂ ಸ್ಪಂಧಿಸಿಲ್ಲ. ಸೋಮುವಾರದಿಂದ (ದಿನಾಂಕ 11 ) ರೈತರು ಪಟ್ಟಣದ ತಾಲೂಕು ಆಡಳಿತ ಸೌಧದ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ತಹಸೀಲ್ದಾರರು ಸೇರಿದಂತೆ ಯಾವುದೇ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರು ಕಷ್ಠಸುಖಗಳನ್ನು ಆಲಿಸುವ ಕೆಲಸ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಜಿಲ್ಲೆಯ ಕೊಬ್ಬರಿ ಬೆಳೆಗಾರರಿಗೆ ಆಗಿರುವ ತಾರತಮ್ಯ ನೀತಿಯ ವಿರುದ್ದ ಧ್ವನಿಯೆತ್ತಿ ರೈತರಿಗೆ ಆಗಿರುವ ಅನ್ಯಾವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿಯ ಅಧ್ಯಕ್ಷ ಎ.ಎಲ್.ನಾಗರಾಜು, ಕಾರ್ಯದರ್ಶಿ ಜೆ.ವೆಂಕಟೇಶ್, ಮುಖಂಡರಾದ ನಾರಾಯಣಸ್ವಾಮಿ, ಚೌಡೇನಹಳ್ಳಿ ಕೃಷ್ಣೇಗೌಡ, ಕರೋಟಿ ತಮ್ಮಯ್ಯ, ಮಾಕವಳ್ಳಿ ಕುಮಾರ್ ಸೇರಿದಂತೆ ಹಲವರು ಹೋರಾಟದಲ್ಲಿದ್ದಾರೆ.